ಮೈಸೂರು(Mysuru): ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ನಿಶ್ಚಿತ. ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆಂದು ತಿಂಗಳಾಂತ್ಯದಲ್ಲಿ ಪ್ರಕಟಿಸುತ್ತೇನೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದರು.
ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ಜಮಖಂಡಿ, ಬಾಗಲಕೋಟೆ, ಧಾರವಾಡ ನಗರ, ಶೃಂಗೇರಿ, ಕಾರ್ಕಳ ಈ ಕ್ಷೇತ್ರಗಳಲ್ಲಿ ಒಂದು ಆಯ್ಕೆ ಮಾಡಲಿದ್ದೇನೆ. ಬಿಜೆಪಿಗೆ ಟಿಕೆಟ್ ಕೇಳಿದ್ದೇನೆ. ಕೊಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ. ಹಿಂದುತ್ವದ ಕಾರ್ಯಸೂಚಿಯ ಮೇಲೆ ಗೆಲ್ಲುವ ವಿಶ್ವಾಸವಿದೆ ಎಂದರು.
ಸಮಾನ ಮನಸ್ಕರು ಬಿಜೆಪಿಯಿಂದ 25 ಟಿಕೆಟ್ ಕೋರಿದ್ದೇವೆ. ಈ ಪೈಕಿ ಐವರು ಸ್ವಾಮೀಜಿಗಳಿಗೂ ಕೇಳಿದ್ದೇವೆ. ಕೊಡದಿದ್ದರೆ ಪಕ್ಷೇತರವಾಗಿ ಸ್ಪರ್ಧಿಸಲಿದ್ದೇವೆ ಎಂದು ಹೇಳಿದರು.
ಪರಿಶಿಷ್ಟರಿಗೆ, ಮಹಿಳೆಯರಿಗೆ ಮೀಸಲು ಇರುವಂತೆ ಬಿಜೆಪಿಯಲ್ಲಿ ಹಿಂದೂಗಳಿಗೂ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ವಿಧಾನಸೌಧದಲ್ಲಿ ಸಾವರ್ಕರ್ ಫೋಟೊ ಅನಾವರಣಕ್ಕೆ ಕಾಂಗ್ರೆಸ್ ಆಕ್ಷೇಪದ ಬಗ್ಗೆ ಪ್ರತಿಕ್ರಿಯಿಸಿದ ಮುತಾಲಿಕ್, ಕಾಂಗ್ರೆಸ್‌ನ ಸಿದ್ದರಾಮಯ್ಯ ಒಂದೇ ಒಂದು ದಿನ ಅಂಡಮಾನ್ ಜೈಲಿನಲ್ಲಿದ್ದು ಬರಲಿ. ಆಗ, ಸಾವರ್ಕರ್ ಅನುಭವಿಸಿದ ಕಷ್ಟ ಏನೆಂದು ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು.