ಶಿವಮೊಗ್ಗ: ರಾಜ್ಯ ಬಿಜೆಪಿಯಲ್ಲಿ ಅಂಕುಡೊಂಕುಗಳನ್ನು ಸರಿ ಪಡಿಸಲು ನಾನು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ತಮ್ಮ ಹಿತೈಷಿಗಳ ಅಭಿಪ್ರಾಯ ಸಂಗ್ರಹಣಾ ಸಭೆಯ ನಂತರ ಮಾತನಾಡಿದ ಅವರು, ಶಿವಮೊಗ್ಗ ಅಂದ್ರೆ, ಭಾರತೀಯ ಜನತಾ ಪಾರ್ಟಿಯ ಸಂಘಟನೆಯ ಕೇಂದ್ರ. ಶಿವಮೊಗ್ಗದಲ್ಲಿ ರಾಷ್ಟ್ರ ಭಕ್ತರ ಬಳಗ ಹೆಚ್ಚಿರುವ ಸ್ಥಳ. ಇದರಿಂದ ಬಿಜೆಪಿಯ ಸಂಘಟನೆ ದೊಡ್ಡದಾಗಿತ್ತು. ಕರ್ನಾಟಕ ರಾಜ್ಯದ ಬಿಜೆಪಿಯ ಅಂಕುಡೊಂಕುಗಳ ಬಗ್ಗೆ ಇಡೀ ಕ್ಷೇತ್ರದ ಜನ ತಮ್ಮ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ ಎಂದರು.
ಅತೀ ಹೆಚ್ಚು ಜನರು, ರಾಜ್ಯದಲ್ಲಿ ಬಿಜೆಪಿ ಮತ್ತೊಂದು ಕಾಂಗ್ರೆಸ್ ಆಗಬಾರದು ಹಾಗೂ ಯಾರೊಬ್ಬರ ಹಿಡಿತದಲ್ಲಿಯೂ ಪಕ್ಷ ಇರಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿಂದುತ್ವವನ್ನು ಉಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಅದೇ ರೀತಿ ರಾಜ್ಯದಲ್ಲಿನ ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ, ಸದಾನಂದ ಗೌಡರು ಈ ರೀತಿ ಹಿಂದೂ ಕಾರ್ಯಕರ್ತರನ್ನು, ಹೋರಾಟಗಾರರನ್ನು ಪಕ್ಕಕ್ಕೆ ಸೇರಿಸಿರುವುದು ಕಾರ್ಯಕರ್ತರಿಗೆ ತುಂಬಾ ನೋವಾಗಿದೆ. ಅದೇ ರೀತಿ ಸಂಘಟನೆಯಲ್ಲಿ ಇದ್ದವರಿಗೆ ತುಂಬಾ ನೋವಾಗಿದೆ ಎಂದರು.
ಈ ಹಿಂದೆ ಇದ್ದ ಬಿಜೆಪಿ ಅಲ್ಲ ಇದು. ಇದು ಕಾಂಗ್ರೆಸ್ ಕೃಪ ಆಗುತ್ತಿದೆ ಎಂದು ಅನೇಕ ಕಾರ್ಯಕರ್ತರು ನನಗೆ ಫೋನ್ ಮಾಡಿ ತಿಳಿಸುತ್ತಿದ್ದಾರೆ. ಇದರ ಬಗ್ಗೆ ಚರ್ಚೆ ಆಗಬೇಕೆಂದು ನಾನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಇದನ್ನು ಕೇಂದ್ರ ಹಾಗೂ ರಾಜ್ಯದ ನಾಯಕರು ಗಮನಹರಿಸಿ, ನರೇಂದ್ರ ಮೋದಿ ಅವರೇ ಪ್ರಧಾನಿ ಆಗಬೇಕೆಂಬ ಅಪೇಕ್ಷೆ ನಮ್ಮದು. ಅವರದು ಇದೆ. ಈ ಕ್ಷೇತ್ರದಲ್ಲಿ ನಾನು ಗೆಲ್ಲಬೇಕು. ನರೇಂದ್ರ ಮೋದಿ ಅವರ ಪರ ಕೈ ಎತ್ತಬೇಕು ಎಂಬ ಅಪೇಕ್ಷೆ ಇದೆ. ಇಂದು ನಾವು ಯಾರನ್ನೂ ಕರೆದಿಲ್ಲ. ಅವರೇ ಸ್ವಯಂ ಪ್ರೇರಣೆಯಿಂದ ಬಂದಿದ್ದಾರೆ ಎಂದರು.
ಇದೇ ವೇಳೆ ಮಾತನಾಡಿದ ಈಶ್ವರಪ್ಪ ಅವರ ಪುತ್ರ ಕಾಂತೇಶ್, “ಈಗಾಗಲೇ ನಮ್ಮ ತಂದೆ ಕೆ.ಎಸ್. ಈಶ್ವರಪ್ಪ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಕುರಿತು ಘೋಷಿಸಿದ್ದಾರೆ. ಶಿವಮೊಗ್ಗದ ಪ್ರತಿಯೊಬ್ಬರ ಹಿಂದೂ ಕಾರ್ಯಕರ್ತರು ಈಶ್ವರಪ್ಪ ಅವರನ್ನು ಗೆಲ್ಲಿಸುತ್ತಾರೆ. ಪ್ರಧಾನಿ ಮೋದಿ ಅವರ ಕೈಯನ್ನು ಬಲಪಡಿಸಲು, ಈಶ್ವರಪ್ಪ ಅವರನ್ನು ಗೆಲ್ಲಿಸಿ ಲೋಕಸಭಾ ಕ್ಷೇತ್ರಕ್ಕೆ ಕಳುಹಿಸಿ ಕೊಡುತ್ತಾರೆ ಎನ್ನುವ ಸಂಪೂರ್ಣ ಆತ್ಮವಿಶ್ವಾಸ ನನಗಿದೆ ಎಂದು ಹೇಳಿದರು.
ಯಾವುದೇ ಮನವೊಲಿಕೆ ಇಲ್ಲ. ಹೈಕಮಾಂಡ್ ಮನವೊಲಿಸಲು ಪ್ರಯತ್ನಿಸಿದರೂ, ನಾವು ಅವರಿಗೆ ಮನವರಿಕೆ ಮಾಡಿಕೊಡುತ್ತೇವೆ. ಯಾವುದೇ ಕಾರಣಕ್ಕೂ ಈಶ್ವರಪ್ಪ ಅವರು ಲೋಕಸಭಾ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ. ಹಾಗೂ ಹಾವೇರಿ ಹಾಗೂ ಗದಗ ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ನು ಈಗಲೂ ನನಗೆ ಕೊಡಿಸುವಂತ ವ್ಯವಸ್ಥೆಯನ್ನು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಾಡುತ್ತಾರೆ ಎನ್ನುವ ವಿಶ್ವಾಸ ನನ್ನಲ್ಲಿದೆ ಎಂದರು.