ಮನೆ ರಾಜಕೀಯ ನಾನು ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತ: ಎ.ಟಿ ರಾಮಸ್ವಾಮಿ

ನಾನು ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತ: ಎ.ಟಿ ರಾಮಸ್ವಾಮಿ

0

ಹಾಸನ: ನಾನು ಒಳ್ಳೆಯವನಾದರೆ ಆಶೀರ್ವಾದ ಮಾಡಿ, ಇಲ್ಲವಾದರೆ ಬೇಡ. ಯಾರಿಗೂ ಅನುಮಾನ ಬೇಡ ನಾನು ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತ ಎಂದು ಜೆಡಿಎಸ್ ಶಾಸಕ ಎ.ಟಿ ರಾಮಸ್ವಾಮಿ ಹೇಳಿದ್ದಾರೆ.

ಹಾಸನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜನರು ಸ್ವಾಭಿಮಾನ ಬೆಳೆಸಿಕೊಳ್ಳಬೇಕಿದೆ. ಎಲ್ಲ ಪಕ್ಷದ ನಾಯಕರು ನನ್ನ ಜೊತೆ ಮಾತನಾಡುತ್ತಿರೋದು ನಿಜ. ಕ್ಷೇತ್ರದ ಜನರ ಜತೆ ಚರ್ಚೆಮಾಡಿ ಮುಂದಿನ ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು.

ರಾಜಕೀಯ ಯುದ್ದ ಆರಂಭ ಆಗಿದೆ. ಎಲ್ಲಿಯವರೆಗೆ ಸಹಿಸೋದು ಹೇಳಿ. ಭೂಮಿ ಮಟ್ಟದವರೆಗೆ ಬಾಗಬಹುದು ಅದಕ್ಕಿಂತ ಕೆಳಗೆ ಬಾಗೋಕೆ ಆಗತ್ತಾ? ಮನೆಯ ಒಳ ಕರೆದು ಕೂರಿಸಿ ಮಾತನಾಡುವ ಸ್ಥಿತಿ ಕೂಡ ಇಲ್ಲ. ಹಾಸನದಲ್ಲಿ ಗುಲಾಮಗಿರಿ ಇದೆ, ಕೈಕಟ್ಟಿ ನಿಲ್ಲಬೇಕಿದೆ. ಆದಿ ಇರೋದಕ್ಕೆ ಅಂತ್ಯ ಇದ್ದೇ ಇರುತ್ತದೆ. ವಿನಾಶ ಕಾಲೇ ವಿಪರೀತ ಬುದ್ದಿ ಎನ್ನುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕಾಂಗ ಸಭೆಗೆ ಎ.ಟಿ.ರಾಮಸ್ವಾಮಿ ಬಂದಿಲ್ಲ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಬಗ್ಗೆ ಅಪಾರ ಗೌರವವಿದೆ. ಆದರೆ ಸತ್ಯ ಮರೆಮಾಚಬಾರದು. ಕುಮಾರಸ್ವಾಮಿಯೇ ಶಾಸಕಾಂಗ ಸಭೆಗೆ ಬಂದಿರಲಿಲ್ಲ, ನಾನು ಹೋಗಿದ್ದೆ. ಬೇಕಿದ್ದರೆ ಸಹಿ ಪುಸ್ತಕ ತೆಗೆದು ನೋಡಿ ಎಂದರು.

ಕ್ಷೇತ್ರದಲ್ಲಿ ಒಬ್ಬರು ನಾನೇ ಅಭ್ಯರ್ಥಿ ಎಂದು ಸಭೆ ಮಾಡುತ್ತಿದ್ದಾರೆ. ರೇವಣ್ಣ ಅನುಮತಿ ಇಲ್ಲದೆ ಇದೆಲ್ಲವೂ ನಡೆಯಲು ಸಾಧ್ಯವೇ? ಲೋಕಸಭೆ ಅಭ್ಯರ್ಥಿ ಆಯ್ಕೆ ಮಾಡುವಾಗ ಪ್ರಜ್ವಲ್ ಹೆಸರೇ ಇರಲಿಲ್ಲ. ಕಾರಣ ದೇವೇಗೌಡರು ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಹೇಳಿರಲಿಲ್ಲ. ಪ್ರಜ್ವಲ್ ಹೆಸರೇಳದಿದ್ದಕ್ಕೆ ಅಂದಿನಿಂದ ನನ್ನ ಮೇಲೆ ದ್ವೇಷ ಶುರುವಾಯ್ತು. ಹಿರಿಯ ಮುತ್ಸದ್ಧಿಯನ್ನೇ ಮನೆ, ಜಿಲ್ಲೆಯಿಂದ ಆಚೆ ಕಳಿಸಿದವರು ಇವರು. ಇನ್ನು ಇವರ ಮುಂದೆ ನಾನು ಯಾವ ಲೆಕ್ಕ. ಈಗಲೂ ಆ ಹಿರಿಯ ಜೀವ ನೋವಿನಿಂದ ನರಳಾಡುತ್ತಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.