ಮೈಸೂರು: ಹೈಕಮಾಂಡ್ ಜೊತೆ ಮಾತಾಡಲು ಈಗ ಕಾಲ ಪಕ್ವವಾಗಿದೆ. ಡಿ. 19 ರ ನಂತರ ನಾವು ನಾಲ್ಕೈದು ಜನ ಹೈಕಮಾಂಡ್ ಭೇಟಿ ಮಾಡುತ್ತೇವೆ ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ. 20, 21, 22 ಈ ದಿನಾಂಕದೊಳಗೆ ಹೈಕಮಾಂಡ್ ಭೇಟಿ ಮಾಡುತ್ತೇವೆ. ಹೈಕಮಾಂಡ್ ಜೊತೆ ಎಲ್ಲಾ ವಿಚಾರ ಚರ್ಚೆ ಮಾಡುತ್ತೇನೆ. ಹೈಕಮಾಂಡ್ ಏನೂ ಹೇಳುತ್ತದೆಯೋ ಆ ರೀತಿ ನಡೆದು ಕೊಳ್ಳುತ್ತೇನೆ ಎಂದರು.
ನನ್ನ ಸೋಲಿನ ವಿಚಾರ, ಅದಕ್ಕೆ ಕಾರಣ ಏನೂ, ಕಾರಣ ಯಾರು ಎಲ್ಲವನ್ನೂ ಹೈಕಮಾಂಡ್ ಮುಂದೆಯೆ ವಿವರವಾಗಿ ಹೇಳುತ್ತೇನೆ ಎಂದ ಸೋಮಣ್ಣ, ಈ ದೇಶಕ್ಕೆ ಪ್ರಧಾನಿ ಮೋದಿ ನಾಯಕತ್ವ ಬೇಕಿದೆ. ಅದು ನನ್ನ ಪ್ರತಿಪಾದನೆ ಎಂದರು.
ಕಾಂಗ್ರೆಸ್ ಶಾಸಕಾಂಗ ಸಭೆಯ ನಂತರದ ಔತಣ ಕೂಟಕ್ಕೆ ಬಿಜೆಪಿ ಶಾಸಕರು ಹೋದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಸೋಮಶೇಖರ್ ಕಾಂಗ್ರೆಸ್ ನಿಂದ ಬಂದವರು. ಸೌಹಾರ್ದಯುತವಾಗಿ ಔತಣ ಕೂಟಕ್ಕೆ ಹೋಗಿರಬಹುದು. ಊಟಕ್ಕೆ ಹೋದ ತಕ್ಷಣ ಎಲ್ಲವೂ ಸರಿ ಇಲ್ಲವೆಂದು ಭಾವಿಸುವುದು ತಪ್ಪು ಎಂದರು.