ಪಾಂಡವಪುರ: ದೇಹದಲ್ಲಿ ಕೊನೆ ಉಸಿರಿರೋವರೆಗೂ ರಾಜ್ಯದ ಜನತೆಗಾಗಿ ರಾಜಕೀಯ ಹೋರಾಟ ಮಾಡುತ್ತೇನೆ.ರಾಜಕೀಯ ನಿವೃತ್ತಿ ಪಡೆಯುತ್ತೇನೆಂದು ಎಂದೂ ಹೇಳಿಲ್ಲ.ಮುಂದೆಯೂ ರಾಜಕಾರಣ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಖಾರವಾಗಿ ಪ್ರತಿಕ್ರಿಯಿಸಿದರು.
ತಾಲೂಕಿನ ಚಿನಕುರಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೋರಾಟ ಮಾಡುವುದು ದೇವೇಗೌಡರ ಹುಟ್ಟುಗುಣ.ಈಗ ನಿಖಿಲ್ ಕುಮಾರಸ್ವಾಮಿ ಅವರ ಗೆಲುವಿಗಾಗಿ ಹೋರಾಟ ಮಾಡುತ್ತಿದ್ದೇನೆ. ಮುಂದಿನ ಎಲ್ಲಾ ಚುನಾವಣೆ ಗಳಲ್ಲೂ ನನ್ನ ಹೋರಾಟ ಇದ್ದೇ ಇರುತ್ತದೆ.ನನ್ನ ೬೨ ವರ್ಷಗಳ ರಾಜಕೀಯ ಇತಿಹಾಸದಲ್ಲಿ ಇಂತಹ ಸರ್ಕಾರ ನೋಡಿಲ್ಲ. ಈ ರಾಜ್ಯದ ಉಳಿವಿಗಾಗಿ ಶಕ್ತಿಮೀರಿ ಹೋರಾಟ ಮಾಡುತ್ತೇನೆ. ಈ ಸರ್ಕಾರವನ್ನು ತೆಗೆಯುವವರೆಗೂ ವಿರಮಿಸುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರದ ಕಾರ್ಯ ವೈಖರಿ ವಿರುದ್ಧ ಕಿಡಿಕಾರಿದರು.
ಕೊತ್ವಾಲ್ ರಾಮಚಂದ್ರನ ಬಳಿ ನೂರು ರೂಪಾಯಿಗೆ ಕೆಲಸ ಪ್ರಾರಂಭಿಸಿದ ಡಿ.ಕೆ.ಶಿವಕುಮಾರ್ ರೈತರು ಮತ್ತು ನಾಡಿನ ಜನತೆಗಾಗಿ ಯಾವತ್ತಾದರೂ ಕಣ್ನೀರು ಹಾಕಿರುವುದು ನೋಡಿದ್ದೀರಾ? ನೆಹರು,ಇಂದಿರಾ ಗಾಂಧಿ ಅವರು ಅಧ್ಯಕ್ಷರಾಗಿದ್ದ ಪಕ್ಷದ ಆದ್ಯಕ್ಷರಾಗಿರುವ ಡಿ.ಕೆ ಕಣ್ಣೀರು ಹಾಕ್ತಾರಾ? ದೇವೇಗೌಡ, ಕುಮಾರಸ್ವಾಮಿ ಮತ್ತು ನಿಖಿಲ್ ಕುಮರಸ್ವಾಮಿ ಕಣ್ಣೀರು ಹಾಕುತ್ತಾರೆ. ದೇಶಕ್ಕೆ ಅನ್ನ ಕೊಡುವ ರೈತನಿಗೆ ನೋವಾದಾಗ ಹೃದಯ ಮರುಗುತ್ತೆ ಆಗ ಕಣ್ಣೀರು ಬರುತ್ತೆ. ನನ್ನ ಮೊಮ್ಮಗನ ಕಣ್ಣೀರಿನ ಬಗ್ಗೆ ಟೀಕಿಸುತ್ತಾರೆ. ನಮ್ಮ ವಂಶವೇ ಕಣ್ಣೀರು ಹಾಕುತ್ತದೆ.ಬಡತನ ಅನುಭವಿಸಿದ್ದೇವೆ.ಬಡವರ ಬಗ್ಗೆ ನಮಗೆ ಕಾಳಜಿ, ನೋವು ಇದೆ ಎಂದು ನಿಖಿಲ್ ಕುಮಾರಸ್ವಾಮಿ ಕಣ್ನೀರಿನ ಬಗ್ಗೆ ವ್ಯಂಗ್ಯವಾಡಿದ್ದ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದರು.
ಪ್ರತಿದಿನ ಡಿ.ಕೆ.ಶಿವಕುಮಾರ್ ಮತ್ತು ಎಚ್.ಡಿ.ಕುಮಾರಸ್ವಾಮಿ ಬಗ್ಗೆ ದಿನ ಚರ್ಚೆಯಾಗುತ್ತಿದೆ. ಡಿಕೆಶಿ ಮತ್ತು ಎಚ್‌ಡಿಕೆ ನಡುವಿನ ವ್ಯಕ್ತಿತ್ವವನ್ನು ಹೋಲಿಕೆ ಮಾಡುವುದು ಬೇಡ. ಎಚ್.ಡಿ.ಕುಮಾರಸ್ವಾಮಿ ಅವರು ರಾಮನಗರವನ್ನು ಜಿಲ್ಲೆಯನ್ನಾಗಿ ಘೋಷಿಸಿದರು.
ಡಿ.ಕೆ.ಶಿ ರಾಮನಗರವನ್ನು ಬೆಂಗಳೂರಿಗೆ ಸೇರಿಸಿದರೆ ಅನುಕೂಲವಾಗುತ್ತದೆ ಎಂದು ಹೇಳುತ್ತಿದ್ದಾರೆ.ಅವರ ತಲೆಯಲ್ಲಿ ಏನೇನು ಇದ್ಯೋ ಎಂದರಲ್ಲದೇ, ಕೆಪಿಸಿಸಿ ಅಧ್ಯಕ್ಷರು ಚನ್ನಪಟ್ಟಣದಲ್ಲಿ ೬ ತಿಂಗಳು ಪ್ರವಾಸ ಮಾಡಿ ನಾನೇ ನಿಲ್ತೀನಿ ಎಂದಿದ್ದರು, ಅವರೇ ಪಾರ್ಟಿ ಅಧ್ಯಕ್ಷರು, ಅವರೇ ಬಿ ಫಾರಂ ಕೊಡುವವರು ಕೊನೆ ಗಳಿಗೆಯಲ್ಲಿ ಸಡನ್ ಆಗಿ ಮಾರ್ಪಡು ಮಾಡಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಅವರ ವ್ಯಕ್ತಿತ್ವ ನೋಡಿ ಪ್ರದಾನಿ ನರೇಂದ್ರ ಮೋದಿ ಅವರು ಕರೆದು ಎರಡು ಮೇಜರ್ ಖಾತೆ ನೀಡಿ ಮಂತ್ರಿಗಿರಿ ನೀಡಿದ್ದಾರೆ. ಮೋದಿ ನಾಯಕತ್ವಕ್ಕೆ ಸಾಟಿಯಾಗುವ ಒಬ್ಬ ನಾಯಕ ಇಂಡಿ ಕೂಟದಲ್ಲಿ ಇಲ್ಲ. ರಾಷ್ಟçದ ಶ್ರೋಯೋಭಿವೃದ್ಧಿಗಾಗಿ ಮೋದಿ ಗೆದ್ದಿದ್ದಾರೆ. ನರೇಂದ್ರ ಮೋದಿ ಮತ್ತು ಅಮೇರಿಕಾದ ನೂತನ ಅಧ್ಯಕ್ಷ ಟ್ರಪ್ ಸಂಬಂಧ ಚನ್ನಾಗಿದೆ.ಇಬ್ಬರು ಸೇರಿ ಎದುರಾಳಿಗಳನ್ನು ಎದುರಿಸುತ್ತಾರೆ.ಪ್ರಾದೇಶಿಕ ಪಕ್ಷವನ್ನು ಎನ್‌ಡಿಎ ಜತೆ ಸೇರಿಸಿದ್ದೇನೆ.ರಾಜ್ಯದ ಉಳಿವಿಗೆ ಶಕ್ತಿಮೀರಿ ಶ್ರಮಿಸುತ್ತೇನೆ.
ಮಂಡ್ಯ ಜಿಲ್ಲೆಯ ಜನ ಹಣ ಹಾಕಿ ಎಚ್‌ಡಿಕೆ ಗೆಲುವಿಗೆ ದುಡಿದಿದ್ದಾರೆ. ಕುಮಾರಸ್ವಾಮಿ ಸೋಲಿಸಲು ಗುತ್ತಿಗೆದಾರನಾಗಿದ್ದ ಎದುರಾಳಿಗೆ ಕಾಮಗಾರಿಯ ೧೨೦ ಕೋಟಿ ಹಣವನ್ನು ಸರ್ಕಾರ ರಿಲೀಸ್ ಮಾಡಿತು, ವಾಲ್ಮೀಕಿ ನಿಗಮದ ೮೦ ಕೋಟಿ ಹಣವನ್ನು ತೆಲಂಗಾಣ ಚುನಾವಣೆಗೆ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು,ರಾಜ್ಯಸಭಾ ಮಾಜಿ ಸದಸ್ಯ ಕುಪೇಂದ್ರರೆಡ್ಡಿ ಇದ್ದರು