ಮನೆ ರಾಷ್ಟ್ರೀಯ ಬಿಹಾರ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ – ಪ್ರಶಾಂತ್ ಕಿಶೋರ್

ಬಿಹಾರ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ – ಪ್ರಶಾಂತ್ ಕಿಶೋರ್

0

ಪಾಟ್ನಾ : ಚುನಾವಣಾ ಚಾಣಕ್ಯ, ರಾಜಕೀಯ ತಂತ್ರಗಾರ ಆಗಿರುವ ಜನ್‌ ಸುರಾಜ್‌ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಇದ್ದಕ್ಕಿದ್ದಂತೆ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.

ಆರ್‌ಜೆಡಿ ಮುಖ್ಯಸ್ಥ, ವಿಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್‌ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಪ್ರಶಾತ್‌ ಕಿಶೋರ್‌ ಅವರ ನಿರ್ಧಾರ ಅಚ್ಚರಿ ಮೂಡಿಸಿದೆ.

ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಬದಲಾಗಿ, ಪಕ್ಷದ ಸಂಘಟನಾ ಕಾರ್ಯಗಳಲ್ಲಿ ತಮ್ಮನ್ನ ತೊಡಗಿಸಿಕೊಳ್ಳುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ನಾನು ಈ ಬಾರಿ ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಇದು ಪಕ್ಷದ ನಿರ್ಧಾರ. ಪಕ್ಷದ ಬೃಹತ್ ಹಿತಾಸಕ್ತಿಗಾಗಿ ನಾನು ನನ್ನ ಸಂಘಟನಾ ಕಾರ್ಯವನ್ನು ಮುಂದುವರಿಸುತ್ತೇನೆ.

ಜನ್‌ ಸುರಾಜ್‌ ಪಕ್ಷವು 150ಕ್ಕೂ ಹೆಚ್ಚು ಸ್ಥಾನಗಳನ್ನ ಪಡೆದರೆ, ಅದು ಬಿಹಾರದ ಜನರ ನಿಜವಾದ ಗೆಲುವಾಗಲಿದೆ. 150ಕ್ಕಿಂತ ಕಡಿಮೆ ಸ್ಥಾನಗಳನ್ನು ಗೆದ್ದರೆ ಅದು ತಮಗೆ ವೈಯಕ್ತಿಕ ಸೋಲು ಎಂದು ಅಭಿಪ್ರಾಯಪಟ್ಟಿದ್ದಾರೆ.

ಜನ್‌ ಸುರಾಜ್‌ ಅಧಿಕಾರಕ್ಕೆ ಬರಬಾರದೆಂದು ಪ್ರಾರ್ಥಿಸುತ್ತಿರುವ ನಾಯಕರು ಮತ್ತು ಅಧಿಕಾರಿಗಳಿಗೆ ಇದೊಂದು ಎಚ್ಚರಿಕೆ. ನಾವು ಸರ್ಕಾರ ರಚಿಸಿದರೆ ಅವರ ʻಕೆಟ್ಟ ದಿನಗಳುʼ ಆರಂಭವಾಗಲಿವೆ. ಇದು ಅವರಿಗೂ ಚೆನ್ನಾಗಿ ತಿಳಿದಿದೆ.

ತಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ, ರಾಜ್ಯದ 100 ಅತ್ಯಂತ ಭ್ರಷ್ಟ ನಾಯಕರನ್ನ ಗುರುತಿಸಿ, ಅವರನ್ನು ವಿಚಾರಣೆಗೆ ಒಳಪಡಿಸಿ ಶಿಕ್ಷೆ ನೀಡಲು ಹೊಸ ಕಾನೂನನ್ನು ಜಾರಿಗೆ ತರಲಾಗುವುದು ಎಂದು ಪ್ರಶಾಂತ್ ಕಿಶೋರ್ ಭರವಸೆ ಕೂಡ ನೀಡಿದ್ದಾರೆ.

ಪ್ರಶಾಂತ್‌ ಕಿಶೋರ್‌ ಅವರ ನಿರ್ಧಾರವನ್ನ ಬಿಜೆಪಿ ಲೇವಡಿ ಮಾಡಿದೆ. ಚುನಾವಣೆಗೆ ನಿಂತರೇ ಅವರು ರೇವಣಿ ಕಳೆದುಕೊಳ್ಳುತ್ತಾರೆಂದು ಗೊತ್ತಿದೆ. ಹಾಗಾಗಿ ಹಿಂದೆ ಸರಿದಿದ್ದಾರೆ ಎಂದು ಕುಟುಕಿದ್ದಾರೆ.

ಈ ಬಾರಿ 2 ಹಂತದಲ್ಲಿ ಬಿಹಾರ ಚುನಾವಣೆ ನಡೆಯಲಿದೆ. ನವೆಂಬರ್‌ 6 ರಂದು ಮೊದಲ ಮತ್ತು ನವೆಂಬರ್‌ 11ರಂದು 2ನೇ ಹಂತದ ಮತದಾನ ನಡೆಯಲಿದೆ. ನ.14ಕ್ಕೆ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.