ದಾವಣಗೆರೆ: ನನ್ನ ಮಗನನ್ನು, ಹುಡುಕಿಕೊಟ್ಟವರಿಗೆ ಬಹುಮಾನ ನೀಡುವೆ ಎಂದು ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಜನರಲ್ಲಿ ಮನವಿ ಮಾಡಿದ್ದಾರೆ.
ತುರ್ತು ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು, ನನ್ನ ಸಹೋದರನ ಮಗನನ್ನು ಅಪಹರಣ ಮಾಡಿದ್ದಾರೆ. ಅವರ ಬೇಡಿಕೆ ಏನಾದರೂ ಇದ್ದರೆ ಹೇಳಲಿ ಬಗೆಹರಿಸುವೆ. ಪೊಲೀಸ್ ದೂರು ಕೂಡ ನೀಡಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ನನ್ನ ಸಹೋದರನ ಮಗನಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಧೈರ್ಯ ಇಲ್ಲ. ದೊಡ್ಡಪ್ಪನ ಪರವಾಗಿ ಕ್ಷೇತ್ರದಲ್ಲಿ ಓಡಾಟ ನಡೆಸಿದ್ದ. ಶಿವಮೊಗ್ಗಕ್ಕೆ ನಮ್ಮ ಗಾಡಿಯಲ್ಲಿಯೇ ಹೋಗಿದ್ದ. ಶಿವಮೊಗ್ಗದಿಂದ ಗೌರಿಗದ್ದೆಗೆ ನಮ್ಮ ಗಾಡಿ ಹೋಗಿಲ್ಲ. ಇನ್ನು ಗುರೂಜಿ ಹತ್ತಿರ ಹೋದಾಗ ಆಶೀರ್ವಾದ ಮಾಡಿದ್ದಾರೆ. ಗ್ರೇ ಬಣ್ಣದ ಗಾಡಿಯಲ್ಲಿ ಆಶ್ರಮಕ್ಕೆ ಹೋಗಿದ್ದರು ಎಂದು ಹೇಳಿದರು.
ನಮ್ಮ ಗಾಡಿ ಶಿವಮೊಗ್ಗಕ್ಕೆ ಹೋಗಿಲ್ಲ. ಇಲ್ಲಿ ವ್ಯವಸ್ಥಿತವಾಗಿ ಸಂಚು ರೂಪಿಸಲಾಗಿದೆ. ನಮ್ಮ ಗಾಡಿ ಎಲ್ಲಿಗೆ ಹೋಯ್ತು ಎನ್ನುವ ಬಗ್ಗೆ ತಿಳಿಯುತ್ತಿಲ್ಲ. ಗೃಹ ಸಚಿವರು ಹಾಗೂ ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಎಲ್ಲರ ಆಶೀರ್ವಾದದಿಂದ ನಮ್ಮ ಮಗ ಸುರಕ್ಷಿತವಾಗಿ ಮರಳಿ ಬರಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಕಿಡ್ನ್ಯಾಫ್ ಮಾಡಿದವರ ಬೇಡಿಕೆ ಪೂರೈಸುವೆ: ಕಿಡ್ನ್ಯಾಪ್ ಮಾಡಿದವರು ಏನಾದರೂ ಬೇಡಿಕೆ ಇದ್ದರೆ ಹೇಳಲಿ. ಅದನ್ನು ಪೂರೈಸುತ್ತೇನೆ. ಪೊಲೀಸ್ ಮೂಲಗಳ ಪ್ರಕಾರ ಗಾಡಿ ಮನೆಗೆ ಬಂದಿದೆ ಎನ್ನುತ್ತಾರೆ. ಆದರೆ ಸಿಸಿ ಕ್ಯಾಮರಾದಲ್ಲಿ ನೋಡಿದಾಗ ನನ್ನ ಮಗನ ಕಾರಿನ ಹಿಂದೆ ಸ್ವಿಫ್ಟ್ ಡಿಸೈರ್ ಕಾರು ಬರುತ್ತಿದೆ. ಅವರೇ ಅಪಹರಿಸಿದ್ದಾರೆ ಅನ್ಸುತ್ತೆ. ನನ್ನ ಮಗನಿಗಾಗಿ ಎಲ್ಲಾ ತ್ಯಾಗಕ್ಕೂ ಸಿದ್ಧನಾಗಿದ್ದೇನೆ ಎಂದು ರೇಣುಕಾಚಾರ್ಯ ಇದೇ ಸಂದರ್ಭದಲ್ಲಿ ಹೇಳಿದರು.