ಮನೆ ರಾಜ್ಯ ವಿಧಾನಸಭಾ ಕ್ಷೇತ್ರವಾರು ‍ಪ್ರವಾಸ ನಡೆಸಿ ಸಾರ್ವಜನಿಕರ ಸಮಸ್ಯೆ ಆಲಿಸುತ್ತೇನೆ:  ಯದುವೀರ್‌ ಒಡೆಯರ್‌

ವಿಧಾನಸಭಾ ಕ್ಷೇತ್ರವಾರು ‍ಪ್ರವಾಸ ನಡೆಸಿ ಸಾರ್ವಜನಿಕರ ಸಮಸ್ಯೆ ಆಲಿಸುತ್ತೇನೆ:  ಯದುವೀರ್‌ ಒಡೆಯರ್‌

0

ಮೈಸೂರು: ವಿಧಾನಸಭಾ ಕ್ಷೇತ್ರವಾರು ‍ಪ್ರವಾಸ ನಡೆಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತೇನೆ, ಮನವಿಗಳನ್ನು ಸ್ವೀಕರಿಸಿ ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇನೆ ಎಂದು ಮೈಸೂರು–ಕೊಡಗು ಕ್ಷೇತ್ರದ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದರು.

Join Our Whatsapp Group

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಜನರು ಬಹಳ ನಿರೀಕ್ಷೆ ಇಟ್ಟು ನನ್ನನ್ನು ಬೆಂಬಲಿಸಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಚುನಾವಣೆಯಲ್ಲಿ ಮತ ಚಲಾಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ಈ ಗೆಲುವು ಬಿಜೆಪಿ–ಜೆಡಿಎಸ್‌ ಕಾರ್ಯಕರ್ತರ ವಿಜಯವಾಗಿದೆ. ಸಂವಿಧಾನವೇ ನಮಗೆ ದೊಡ್ಡದು. ಅದರ ಆಧಾರದ ಮೇಲೆಯೇ ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿದರು.

ಜಿಲ್ಲಾಡಳಿತದೊಂದಿಗೆ ಶೀಘ್ರದಲ್ಲೇ ಸಭೆ ನಡೆಸಿ, ಕೇಂದ್ರದ ಯೋಜನೆಗಳ ಮಾಹಿತಿ ಪಡೆದು ಪ್ರಗತಿ ಪರಿಶೀಲನೆ ನಡೆಸುತ್ತೇನೆ. ಅವುಗಳ ತ್ವರಿತ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು ಎಂದರು.

ಮಾಧ್ಯಮವು ಜನರ ಧ್ವನಿಯಾಗಿ ಕೆಲಸ‌ ಮಾಡುತ್ತಿರುವುದರಿಂದ ನಮಗೂ ಸಹಾಯವಾಗುತ್ತದೆ. ತಳಮಟ್ಟದಲ್ಲಿ ಸಮಸ್ಯೆ ಏನಿದೆ ಎಂಬುದನ್ನು ತಿಳಿದು ಜನತೆಗೆ ಸ್ಪಂದಿಸುತ್ತೇನೆ. ನನ್ನದೇ ಆದ ಕೆಲವು ಯೋಜನೆಗಳಿವೆ. ಎರಡೂ ಜಿಲ್ಲೆಗಳಲ್ಲೂ ಪ್ರವಾಸೋದ್ಯಮ, ಪರಂಪರೆ ಸಂರಕ್ಷಣೆ ಹಾಗೂ ಕೃಷಿಗೆ ಆದ್ಯತೆ ಕೊಡಲಾಗುವುದು. ಕ್ಷೇತ್ರವು ವಿಶಾಲವಾದ ವ್ಯಾಪ್ತಿ ಹೊಂದಿರುವುದರಿಂದ ಎಲ್ಲರನ್ನೂ ಭೇಟಿಯಾಗುವುದು ಸವಾಲಿನ ಕೆಲಸ. ಇದಕ್ಕೆ ಸಮಯ ಬೇಕಾಗುತ್ತದೆ ಎಂದು ಹೇಳಿದರು.

ಭ್ರಷ್ಟಾಚಾರ ರಹಿತ ಹಾಗೂ ಪಾರದರ್ಶಕ ಆಡಳಿತ ಕೊಡಲು ಮೈಸೂರು ಅರಸರ ತತ್ವ–ಸಿದ್ಧಾಂತ, ಎನ್‌ಡಿಎ ತತ್ವದ ಆಧಾರದ ಮೇಲೆ ಕೆಲಸ ಮಾಡುತ್ತೇನೆ. ಕೈಗಾರಿಕೆ ಹಾಗೂ ರೈಲ್ವೆಗೆ ಒತ್ತು ಕೊಡಲಾಗುವುದು. ರಾಜಕಾರಣದಲ್ಲಿ ರಾಜಕೀಯ ಇದ್ದೇ ಇರುತ್ತದೆ. ಆದರೆ, ರಾಜಕೀಯ ‌ಮೀರಿ ಕೆಲಸ ಮಾಡಲು ಪ್ರಯತ್ನಿಸುತ್ತೇನೆ. ಹಿಂದಿನ ಸಂಸದರು ಸೇರಿದಂತೆ ಎಲ್ಲರ ಸಹಕಾರ ಪಡೆಯುವೆ’ ಎಂದರು.

ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾಲ್ಸ್‌ಡೌನ್‌ ಕಟ್ಟಡವನ್ನು ನೆಲಸಮಗೊಳಿಸುವ ಅವಶ್ಯಕತೆ ಇಲ್ಲ. ಅವುಗಳ ಸಂರಕ್ಷಣೆಗೆ ಕ್ರಮ ವಹಿಸಲಾಗುವುದು. ಚಾಮುಂಡಿ ಬೆಟ್ಟ ಧಾರ್ಮಿಕ ಸ್ಥಳ. ಅದನ್ನು ಸಂರಕ್ಷಣೆಗೂ ಒತ್ತು ನೀಡಲಾಗುವುದು ಎಂದರು.

ಸದ್ಯಕ್ಕೆ ಕುವೆಂಪುನಗರದಲ್ಲಿ ನಮ್ಮ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಮುಂದೆ ಸರ್ಕಾರಿ ಕಚೇರಿಯನ್ನೂ ಆರಂಭಿಸಲಾಗುವುದು. ಅಲ್ಲೂ ಸಾರ್ವಜನಿಕರಿಗೆ ಸ್ಪಂದಿಸುವ ಕೆಲಸವಾಗಲಿದೆ  ಎಂದು ತಿಳಿಸಿದರು.

ಗ್ಯಾರಂಟಿ ಮುಂದುವರಿಯಬೇಕು:

ಕಾಂಗ್ರೆಸ್‌ನವರು ಗ್ಯಾರಂಟಿಗಳ ಆಧಾರದ ಮೇಲೆಯೇ ಚುನಾವಣೆ ಗೆದ್ದಿದ್ದಾರೆ. ಅವುಗಳು ಮುಂದುವರಿಯಬೇಕು. ಆದರೆ, ಈ ವಿಷಯದಲ್ಲಿ ತೀರ್ಮಾನ ಕೈಗೊಳ್ಳುವುದು ಆ ಪಕ್ಷದವರಿಗೇ ಸೇರಿದ್ದಾಗಿದೆ  ಎಂದರು.

ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ರಾಜೇಂದ್ರ, ನಗರ ಜಿಲ್ಲಾ ಘಟಕದ ಅಧ್ಯಕ್ಷ ಎಲ್. ನಾಗೇಂದ್ರ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಪಾಲ್ಗೊಂಡಿದ್ದರು.

ಹಿಂದಿನ ಲೇಖನಪೋಕ್ಸೊ ಪ್ರಕರಣ: ಬಿ.ಎಸ್.ಯಡಿಯೂರಪ್ಪ ಬಂಧನ ಕೋರಿ ಅರ್ಜಿ: ಕೆಲವೇ ಸಮಯದಲ್ಲಿ ಆದೇಶ ಪ್ರಕಟ
ಮುಂದಿನ ಲೇಖನಯಡಿಯೂರಪ್ಪಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ