ಚಿಕ್ಕಬಳ್ಳಾಪುರ: ನಾನೂ ಅದೇ ರಕ್ತದಲ್ಲಿ ಬರೆದುಕೊಡುತ್ತೇನೆ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಸರ್ಕಾರ ರಚನೆ ಮಾಡಲ್ಲ, ಅಧಿಕಾರಕ್ಕೆ ಬರುವುದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.
ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಚಾರದ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿ, ಈ ಚುನಾವಣೆ ನಂತರ ಕಾಂಗ್ರೆಸ್ ಶಾಶ್ವತವಾಗಿ ಮುಳುಗುವ ದೋಣಿಯಾಗಲಿದೆ. ಡಿ.ಕೆ. ಶಿವಕುಮಾರ್ ಸಮೇತ ಮುಂದಿನ ದಿನಗಳಲ್ಲಿ ಬಿಜೆಪಿಗೆ ಬರುವ ದಿನಗಳು ದೂರವಿಲ್ಲ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ದೇಶದಲ್ಲಿ ಅವನತಿಗೆ ಬಂದಿದ್ದು, ಕರ್ನಾಟಕದಲ್ಲಿಯೂ ಅವನತಿ ಹೊಂದಲಿದೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳೂ ಸಿಗುವುದಿಲ್ಲ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ನವರು ಯಾರ ಮೀಸಲಾತಿ ತೆಗೆಯುವುದಾಗಿ ನೇರವಾಗಿ ಹೇಳಲಿ, ಒಕ್ಕಲಿಗ, ಲಿಂಗಾಯಿತ, ಪರಿಶಿಷ್ಟರು ಇವರಲ್ಲಿ ಯಾರ ಮೀಸಲಾತಿ ತೆಗೆಯಲಿದ್ದೀರಾ ಎಂಬುದು ಹೇಳಿ, ನಿಮ್ಮದೇ ಸರ್ಕಾರ, ನಿಮ್ಮದೇ ಮುಖ್ಯಮಂತ್ರಿ, ನೀವೇ ಇಂಧನ ಸಚಿವರಾಗಿದ್ದರಲ್ಲ, ಆಗ ಯಾಕೆ ಮೀಸಲಾತಿ ಹೆಚ್ಚಲ ಮಾಡಲಿಲ್ಲ ಎಂದು ಅವರು ಪ್ರಶ್ನಿಸಿದರು.
ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಪ್ರಚಾರ ನಡೆಸುತ್ತಿದ್ದ ವೇಳೆ ರೈತ ಮಹಿಳೆಯೊಬ್ಬರು ಆರತಿ ತೆಗೆದು, ಅವರು ದುಡಿದ ಹಣವನ್ನು ಚುನಾವಣಾ ವೆಚ್ಚಕ್ಕಾಗಿ ಸಚಿವರಿಗೆ ದೇಣಿಗೆಯಾಗಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಜನರ ಇಂತಹ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಇದನ್ನು ಕ್ಷೇತ್ರದಲ್ಲಿ ನಾವು ಸಂಪಾದಿಸಿರುವುದು ಸಂತಸ ತಂದಿದೆ ಎಂದರು.ನಿಜವಾದ ಜನ ನಾಯಕ ಎಂಬುದಕ್ಕೆ ಸಾಗರೋಪಾದಿಯಲ್ಲಿ ಸೇರುತ್ತಿರುವ ಜನರ ಪ್ರೀತಿಯೇ ನಿದರ್ಶನವಾಗಿದೆ. ಕಳೆದ 10 ವರ್ಷಗಳಲ್ಲಿ ತಾವು ನೀಡಿದ ಅಭಿವೃದ್ಧಿ ಜನರಿಗೆ ಮುಟ್ಟಿದೆ, ಹಾಗಾಗಿ ಮಹಿಳೆಯರೂ ಸೇರಿ ಎಲ್ಲರೂ ಉತ್ಸಾಹದಿಂದ ತಮ್ಮನ್ನು ಬೆಂಬಲಿಸುತ್ತಿದ್ದಾರೆ. ಇದರಿಂದ ತಮ್ಮಲ್ಲಿ ಧನ್ಯತಾ ಭಾವ ಮೂಡುತ್ತಿದೆ , ಪ್ರತಿ ಗ್ರಾಪಂನಲ್ಲಿ ಸಾವಿರಾರು ಮಂದಿ ಬಂದು ಆಶೀರ್ವಾದ ಮಾಡುತ್ತಿದ್ದಾರೆ ಎಂದರು.