ಬೆಂಗಳೂರು(Bengaluru): ಮತದಾನ ದತ್ತಾಂಶ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆ ಪ್ರತಿನಿಧಿಗಳಿಗೆ ಗುರುತಿನ ಚೀಟಿ ನೀಡಿದ ಇಬ್ಬರು ಕಂದಾಯ ಅಧಿಕಾರಿ ಹಾಗೂ ಒಬ್ಬರು ಉಪ ಕಂದಾಯ ಅಧಿಕಾರಿ ಸೇರಿದಂತೆ ಮೂವರನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಶಿವಾಜಿನಗರದ ಕಂದಾಯ ಅಧಿಕಾರಿ ಸುಹೇಲ್ ಅಹಮದ್, ಮಹದೇವ ಪುರದ ಕಂದಾಯ ಅಧಿಕಾರಿ ಕೆ. ಚಂದ್ರಶೇಖರ್ ಹಾಗೂ ಚಿಕ್ಕಪೇಟೆಯ ಉಪ ಕಂದಾಯ ಅಧಿಕಾರಿ ವಿ.ಬಿ. ಭೀಮಾಶಂಕರ್ ಅವರು ಮತದಾರರ ನೋಂದಣಾಧಿ ಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅವರನ್ನು ಸೋಮವಾರ (ನ.21)ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಶಿವಾಜಿನಗರ ಕ್ಷೇತ್ರದಲ್ಲಿ ಚಿಲುಮೆಪ್ರತಿನಿಧಿಗಳ ಮನವಿ ಮೇರೆಗೆ ಚಂದ್ರಶೇಖರ್ ಅವರಿಗೆ 14 ಮತಗಟ್ಟೆಮಟ್ಟದ ಸಂಯೋಜಕ (ಬಿಎಲ್’ಸಿ) ಗುರುತಿನ ಚೀಟಿಗಳನ್ನು ಸುಹೇಲ್ ವಿತರಿಸಿದ್ದಾರೆ.
ಆದರೆ ಸಂಸ್ಥೆಯವರು ಒಂದು ದಿನವೂ ಕ್ಷೇತ್ರವ್ಯಾಪ್ತಿಯಲ್ಲಿ ಜನಜಾಗೃತಿ ಮೂಡಿಸುವ ಅಥವಾ ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಕಾರ್ಯ, ತಿದ್ದುಪಡಿ, ಸೇರ್ಪಡೆ ಕಾರ್ಯ ಮಾಡಿಲ್ಲ. ಗುರುತಿನ ಚೀಟಿ ಹಿಂದಿರುಗಿಸಿಲ್ಲ. ಚುನಾವಣೆ ಆಯೋಗದ ನಿಯಮ ಉಲ್ಲಂಘಿಸಿ ಖಾಸಗಿ ವ್ಯಕ್ತಿಗಳಿಗೆ ಗುರುತಿನ ಚೀಟಿ ವಿತರಿಸಿರುವುದರಿಮದ ಸುಹೇಲ್ ಅವರನ್ನು ಅಮಾನತುಗೊಳಿಸಲಾಗಿದೆ.
ಮಹದೇವಪುರ ವಿಧಾನಸಭೆ ಕ್ಷೇತ್ರ ದಲ್ಲಿ ಚಿಲುಮೆ ಸಂಸ್ಥೆಯ ಲೋಕೇಶ್ ಕೆ.ಎಂ. ಅವರಿಗೆ ಮತದಾರರ ನೋಂದಣಾಧಿಕಾರಿ ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್’ಒ) ಗುರುತಿನ ಚೀಟಿ ನೀಡಿದ್ದಾರೆ. ಈ ಬಗ್ಗೆ ಜಂಟಿ ಮುಖ್ಯ ಚುನಾವಣಾಅಧಿಕಾರಿ ಪತ್ರ ಬರೆದಿದ್ದರು. ಅದರಂತೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಲೋಕೇಶ್ ಮೇಲೆ ದೂರು ನೀಡಲಾಗಿತ್ತು.
ಖಾಸಗಿ ಮಾಹಿತಿ ಸಂಗ್ರಹಿಸಿರುವ ಬಗ್ಗೆ ತನಿಖೆ ನಡೆಸಲು ಜಿಲ್ಲಾಧಿಕಾರಿ ವರದಿ ನೀಡಿದ್ದಾರೆ. ಈ ಪ್ರಕರಣವು ಮಹದೇವ ಪುರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿ ಯಲ್ಲಿ ನಡೆದಿರುವುದರಿಂದ ಕೆ. ಚಂದ್ರ ಶೇಖರ್ ಅವರನ್ನು ಅಮಾನತು ಮಾಡಲಾಗಿದೆ.
ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಚಿಲುಮೆ ಸಂಸ್ಥೆಯ ಪ್ರತಿನಿಧಿ ಶಿವಕುಮಾರ್ ಹಾಗೂ ಪುನೀತ್, ಪಾಲಿಕೆ ಸಿಬ್ಬಂದಿಯೊಂದಿಗೆ ಜಾಗೃತಿ ಕಾರ್ಯದಲ್ಲಿ ತೊಡಗಿದ್ದರು. ಅವರೂ ಅನುಮತಿ ಹಾಗೂ ಬಿಎಲ್’ಸಿ ಗುರುತಿನ ಚೀಟಿ ಕೋರಿದ್ದರು. ಅದನ್ನು ನೀಡಿಲ್ಲ ಎಂದು ಚಿಕ್ಕಪೇಟೆ ಸಹಾಯಕ ಕಂದಾಯ ಅಧಿಕಾರಿ ವರದಿ ನೀಡಿದ್ದಾರೆ.
ಆದರೆ, ಗುರುಬಸ್ಸು, ವಿನಾಯಕ ಎಸ್.ಎಚ್. ಅವರಿಗೆ ಮತದಾರರ ನೋಂದಣಾಧಿಕಾರಿ ಬಿಎಲ್‌ಸಿ ಗುರುತಿನ ಚೀಟಿ ನೀಡಿರುವ ಪುರಾವೆ ಲಭ್ಯವಾಗಿದೆ. ಆದ್ದರಿಂದ ವಿ.ಬಿ. ಭೀಮಾಶಂಕರ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.