ಯಾತ್ರಿಕರಲ್ಲಿ ಕೆಲವರು ಕೇವಲ ಪ್ರೇಕ್ಷಕರಾಗಿರುತ್ತಾರೆ ಅವರಿಗೆ ನೋಟವೇ ಮುಖ್ಯ ಇನ್ನು ಕೆಲವರು ಭಕ್ತರೂ ಜ್ಞಾನಿಗಳಿಗೂ ಆಗಿರುತ್ತಾರೆ. ಅಂಥವರಿಗೆ ದೇವರ ದರ್ಶನ, ತೀರ್ಥ ಪ್ರಸಾದ ಮಾತ್ರವಲ್ಲದೆ ವಿಗ್ರಹಗಳ ಬಗ್ಗೆಯೇನು? ಅವುಗಳ ಲಕ್ಷಣಗಳೇನು? ಅವುಗಳ ರೂಪ ಮತ್ತು ಕಾಂತಿ ಮೊದಲಾದ ವಿಚಾರಗಳ ಬಗ್ಗೆಯೂ ಅರಿಯುವ ಕುತೂಹಲವಿರುತ್ತದೆ. ಈ ವಿಚಾರಗಳಲ್ಲೂ ಆಗಮಶಾಸ್ತ್ರದಲ್ಲಿ ನಿರೂಪಿಸಲ್ಪಟ್ಟಿವೆ. ಮೂರ್ತಿ ಶಿಲ್ಪದಲ್ಲಿ ಪ್ರತಿಯೊಂದು ಮೂರ್ತಿಗೂ ಬೇರೆ ಬೇರೆ ತತ್ವಗಳ ಸಂಕೇತವುಂಟು. ಶಿವಮೂರ್ತಿಗಳಲ್ಲಿ ಸೃಷ್ಟಿಮೂರ್ತಿ, ಸ್ಥಿತಿ ಮೂರ್ತಿ ಸಂಹಾರ ಮೂರ್ತಿ ಸ್ಥಿತಿಮೂರ್ತಿ, ಸಂಹಾರಮೂರ್ತಿ ತಿರೋಧನಮೂರ್ತಿ, ಅನುಗ್ರಹ ಮೂರ್ತಿ ಎಂದು ಐದು ವಿಧಗಳಿವೆ. ಶಕ್ತಿಮೂರ್ತಿಗಳಲ್ಲಿ ದ್ವಿಭಂಗಿ, ತ್ರಿಭಂಗಿಯೆಂದು ಎರಡು ವಿಧಗಳಿವೆ. ವಿಷ್ಣುಮೂರ್ತಿಗಳಲ್ಲಿ ತ್ರಿಭಂಗ್ಯಾದಿ ವಿನ್ಯಾಸಗಳ ಜೊತೆಗೆ ಸ್ಥಿರಮೂರ್ತಿ, ಅಸೀನಮೂರ್ತಿ, ಶಯನಮೂರ್ತಿಗಳೆಂದು ಮೂರು ವಿಧಗಳಿವೆ. ಶಿವಲಿಂಗಗಳಲ್ಲಿಯೂ ಸ್ಥಿರಲಿಂಗ,ಅಸೀನಲಿಂಗ,ಶಯನ ಲಿಂಗ ಎಂದು ಮೂರು ವಿಧಗಳುಂಟು.
ಉದಾಹರಣೆಗೆ ಶ್ರೀ ಕೃಷ್ಣನ ವಿವಿಧ ರೂಪಗಳನ್ನು ಗಮನಿಸೋಣ. ಅಂಬೆಗಾಲಿಟ್ಟುಕೊಂಡು ಮಂದಹಾಸದಿಂದ ನಲಿಯುತ್ತ ಕಂಗೊಳಿಸುವ ಬಾಲಕೃಷ್ಣ. ವೀರಾವೇಶದಿಂದ ಕಾಳಿನದಿ ಮಡುವಿನಲ್ಲಿ ಧುಮುಕಿ, ಗೋವು ಗೋಪಾಲರಿಗೆ ಹಿಂಸೆ ಕೊಡುತ್ತಿದ್ದ ಕಳಸರ್ಪದ ಸೊಕ್ಕನ್ನಡಗಿಸಿ, ಅದರ ಹೆಡೆಯ ಮೇಲೆ ರುದ್ರತಾಂಡವ ನೃತ್ಯ ಮಾಡಿದ ಶೂರಕೃಷ್ಣ ರುಕ್ಮಿಣೀ ಕಲ್ಯಾಣ ಮಾಡಿಕೊಂಡು, ಸತ್ಯಭಾಮೆಯೊಡಗೂಡಿ ರಾರಾಜಿಸುವ ಸುಂದರ ಮೂರ್ತಿ ಕೃಷ್ಣ .ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಗೀತೋಪದೇಶ ಮಾಡಿ,ಆತ್ಮ ಸಾಕ್ಷಾತ್ಕಾರವನ್ನು ಬೋಧಿಸಿ, ವಿಶ್ವರೂಪದರ್ಶನವಿತ್ತ ಮಹಾಮಹಿಮ ಶ್ರೀಕೃಷ್ಣ ಹೀಗೆ ವಿವಿಧ ಬಂಗಿಯಲ್ಲಿ ಶ್ರೀ ಕೃಷ್ಣನ ವಿಗ್ರಹಗಳ ನಿರ್ಮಾಣ ಮಾಡುವಾಗ ಅವುಗಳಿಗೆ ತಕ್ಕಂತಹ ಅಂಗ,ಭಂಗಿ, ವಿನ್ಯಾಸ, ವಿಶಿಷ್ಟವಾದ ಸೌಂದರ್ಯ ಮೂಡಿಬರುವ ಕಲಕೌಶಲ್ಯ ಮೊದಲಾದ ಅಂಶಗಳ ಕಡೆ ಸಾಕಷ್ಟು ಗಮನವಿತ್ತು ನಿರ್ಮಿಸಬೇಕು. ವಿಗ್ರಹಗಳು ಶಾಶ್ವತವಾಗಿ ಉಳಿದು ಭಕ್ತರನ್ನಾಕರ್ಷಿಸುತ್ತವೆ.
ಭಾರತೀಯ ವಾಸ್ತು ಶಿಲ್ಪ ಮತ್ತು ಮೂರ್ತಿ ಶಿಲ್ಪಗಳು ಒಂದು ಕಟ್ಟುಪಾಡಿನಲ್ಲಿ ಅಡಗಿವೆ.ಆ ನಿಯಮ ನಿಬಂಧನೆಗಳಂತೆ ನಿರ್ಮಿತವಾದ ದೇವಾಲಯಗಳಲ್ಲಿರುವ ಸ್ಥಳಗಳು ಪವಿತ್ರ ಕ್ಷೇತ್ರಗಳೆಂದು ಪರಿಗಣಿಸಲ್ಪಟ್ಟು ಯಾತ್ರಾ ಸ್ಥಳಗಳಾಗಿ ಪ್ರಖ್ಯಾತಿ ಹೊಂದಿವೆ, ಪಂಡಿತ ಪಾಮರಿಗೆ, ಅನುರಕ್ತ ವಿರಕ್ತರಿಗೆ ಆನಂದಾನುಭವವನ್ನುಂಟು ಮಾಡುತ್ತ ಕೈಗನ್ನಡಿಯಂತೆ ಇಂದಿಗೂ ಪ್ರಕಾಶಿಸುತ್ತಿವೆ.