ಮಡಿಕೇರಿ: ಪ್ರಜಾಪ್ರಭುತ್ವ ನಾಶದ ಅಂಚಿಗೆ ಹೋಗುತ್ತಿದೆ. ಬಿಜೆಪಿ ಗೆದ್ದರೆ ಇದೆ ಕೊನೆಯ ಚುನಾವಣೆಯಾಗಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಖಾತೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಪರಿಶಿಷ್ಟ ಜಾತಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಇದು ಅತ್ಯಂತ ಮಹತ್ವದ ಚುನಾವಣೆ. ಪ್ರಜಾಪ್ರಭುತ್ವದ ಅಳಿವು ಉಳಿವಿನ ಚುನಾವಣೆ. ಸಂವಿಧಾನ ಉಳಿಸುವ ಚುನಾವಣೆ ಎಂದು ಅವರು ಹೇಳಿದರು.
ಅಟಲ್ ಬಿಹಾರಿ ವಾಜಪೇಯಿ ಅವರು ಸಂವಿಧಾನ ಪರಾಮರ್ಶೆ ಮಾಡಬೇಕು ಎಂದು ಹೇಳಿದಾಗ ನಾನು, ದೇವನೂರ ಮಹಾದೇವ, ಪ.ಮಲ್ಲೇಶ್ ಹೋರಾಟ ಮಾಡಿ ತಡೆದೆವು. ನಂತರವೂ ಸಂವಿಧಾನದ ಬದಲಾವಣೆ ಮಾತುಗಳನ್ನು ಬಿಜೆಪಿ ನಾಯಕರು ಹೇಳುತ್ತಿದ್ದರು. ಆದರೆ ನಮ್ಮ ಸರ್ಕಾರ ಸಂವಿಧಾನ ಜಾಗೃತಿ ಜಾಥಾ ಮಾಡಿದ ಮೇಲೆ ಆ ಮಾತುಗಳು ಕಡಿಮೆಯಾಗಿವೆ. ಅಷ್ಟರಮಟ್ಟಿಗೆ ನಮ್ಮ ಕಾರ್ಯಕ್ರಮ ಜಾಗೃತಿ ಮೂಡಿಸಿದೆ ಎಂದರು.
ಆದರೆ, ಹಿಂದೂ ರಾಷ್ಟ್ರ ನಿರ್ಮಾಣ ಮಾಡುತ್ತೇವೆ ಎನ್ನುವುದೇ ಸಂವಿಧಾನ ಬದಲಾವಣೆ ಮಾಡುವ ಇಂಗಿತವನ್ನು ವ್ಯಕ್ತಪಡಿಸುತ್ತದೆ. ಸಂವಿಧಾನ ಉಳಿಯದೇ ಹೋದರೆ ನಾವು ಯಾರೂ ಉಳಿಯುವುದಿಲ್ಲ ಎಂದರು.