ಚೆನ್ನೈ(Chennai): ಪತಿಯಿಂದ ದೂರವಿರುವ ಪತ್ನಿಯು ‘ತಾಳಿ’ (ಮಂಗಳಸೂತ್ರ) ತೆಗೆದರೆ ಅದು ಪತಿಗೆ ಮಾನಸಿಕ ಹಿಂಸೆ ನೀಡಿದ ಅತೀವ ಕ್ರೌರ್ಯದ ಕೃತ್ಯವಾಗಿದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ಪತ್ನಿಯಿಂದ ನೊಂದ ವ್ಯಕ್ತಿಗೆ ವಿಚ್ಛೇದನ ನೀಡಿರುವ ಕೋರ್ಟ್ ಈ ಆದೇಶ ನೀಡಿದೆ.ಈರೋಡ್‌ನ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಸಿ ಶಿವಕುಮಾರ್ ಅವರ ಸಿವಿಲ್ ಮೇಲ್ಮನವಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ವಿ ಎಂ ವೇಲುಮಣಿ ಮತ್ತು ಎಸ್ ಸೌಂದರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ತಮಗೆ ವಿಚ್ಛೇದನ ನೀಡಲು ನಿರಾಕರಿಸಿ ಸ್ಥಳೀಯ ಕೌಟುಂಬಿಕ ನ್ಯಾಯಾಲಯವು ಜೂನ್ 15, 2016ರಂದು ನೀಡಿದ್ದ ಆದೇಶಗಳನ್ನು ರದ್ದುಗೊಳಿಸುವಂತೆ ಕೋರಿ ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ, ಪತಿಯಿಂದ ದೂರವಿದ್ದ ಸಮಯದಲ್ಲಿ ತನ್ನ ತಾಳಿಯನ್ನು ತೆಗೆದಿರುವುದಾಗಿ ಪತ್ನಿ ಒಪ್ಪಿಕೊಂಡಿದ್ದಾರೆ. ಆದರೆ, ತಾನು ತಾಳಿಯನ್ನು ತನ್ನ ಬಳಿಯೇ ಉಳಿಸಿಕೊಂಡಿದ್ದೇನೆ ಮತ್ತು ಸರವನ್ನು ಮಾತ್ರ ತೆಗೆದಿದ್ದೇನೆ ಎಂದು ಪತ್ನಿ ವಿವರಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಅವರ ವಕೀಲರು, ಹಿಂದೂ ವಿವಾಹ ಕಾಯ್ದೆಯ ವಿಧಿ 7 ಅನ್ನು ಉಲ್ಲೇಖಿಸಿ, ಕಾನೂನು ಪ್ರಕಾರ ಮದುವೆಗೆ ತಾಳಿ ಕಟ್ಟುವ ಅಗತ್ಯವಿಲ್ಲ. ಆದ್ದರಿಂದ ಹೆಂಡತಿ ಅದನ್ನು ತೆಗೆದುಹಾಕಿದರೂ ಸಹ ವೈವಾಹಿಕ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಾದಿಸಿದ್ದರು.
ಆದರೆ,‘ಈ ಭಾಗದಲ್ಲಿ ನಡೆಯುವ ಮದುವೆ ಸಮಾರಂಭಗಳಲ್ಲಿ ತಾಳಿ ಕಟ್ಟುವುದು ಅತ್ಯಗತ್ಯ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ’ಎಂದು ಪೀಠ ಸೂಚಿಸಿದೆ.
ಅರ್ಜಿದಾರರು ತಾಳಿಯನ್ನು ತೆಗೆದುಹಾಕಿದ್ದಾರೆ ಮತ್ತು ಅದನ್ನು ಈಗಲೂ ಬ್ಯಾಂಕ್ ಲಾಕರ್‌ನಲ್ಲಿ ಇಟ್ಟುಕೊಂಡಿದ್ದಾರೆ ಎಂಬುದು ತಾಳಿ ಬಗ್ಗೆ ಅವರ ಸ್ವಂತ ಒಪ್ಪಿಗೆಯ ಸಂಕೇತವಾಗಿದೆ. ಯಾವುದೇ ಹಿಂದೂ ವಿವಾಹಿತ ಮಹಿಳೆ ತನ್ನ ಗಂಡನ ಜೀವಿತಾವಧಿಯಲ್ಲಿ ಯಾವುದೇ ಸಮಯದಲ್ಲಿ ಮಂಗಳಸೂತ್ರವನ್ನು ತೆಗೆಯುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ ಎಂದು ಪೀಠ ಹೇಳಿದೆ.
ಮಹಿಳೆಯ ಕುತ್ತಿಗೆಯಲ್ಲಿರುವ ತಾಳಿಯು ವೈವಾಹಿಕ ಜೀವನದ ನಿರಂತರತೆಯನ್ನು ಸಂಕೇತಿಸುವ ಪವಿತ್ರ ವಸ್ತುವಾಗಿದೆ. ಮತ್ತು ಗಂಡನ ಮರಣದ ನಂತರ ಮಾತ್ರ ಅದನ್ನು ತೆಗೆದುಹಾಕಲಾಗುತ್ತದೆ. ಆದ್ದರಿಂದ, ಅರ್ಜಿದಾರರು(ಪತ್ನಿ) ಅದನ್ನು ತೆಗೆದುಹಾಕಿದ್ದು ಮಾನಸಿಕ ಕ್ರೌರ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಬಹುದು, ಏಕೆಂದರೆ ಇದು ಪತಿಗೆ ಅತೀವ ಸಂಕಟವನ್ನು ಉಂಟುಮಾಡಬಹುದು ಎಂದು ಪೀಠವು ಹೇಳಿದೆ.
ಅದೇ ಮಾನದಂಡವನ್ನು ಅನ್ವಯಿಸಿ ತಾಳಿ ತೆಗೆದುಹಾಕುವುದನ್ನು ಸಾಮಾನ್ಯವಾಗಿ ಅಸಾಂಪ್ರದಾಯಿಕ ಕ್ರಿಯೆ ಎಂದು ಪರಿಗಣಿಸಲಾಗುತ್ತದೆ ಎಂದು ಪೀಠ ಹೇಳಿದೆ.
ವೈವಾಹಿಕ ಸಂಬಂಧವನ್ನು ಕೊನೆಗೊಳಿಸಲು ಮಾಂಗಲ್ಯ ಸರವನ್ನು ತೆಗೆದುಹಾಕುವುದು ಸಾಕು ಎಂದು ನಾವು ಹೇಳುವುದಿಲ್ಲ, ಆದರೆ, ಪ್ರತಿವಾದಿಯು(ಪತ್ನಿ) ಒಪ್ಪಿಕೊಂಡ ಕೃತ್ಯವು ಅವರ ಉದ್ದೇಶಗಳು ಏನೆಂಬುದಕ್ಕೆ ಸಾಕ್ಷಿಯಾಗಿದೆ. ಪ್ರತ್ಯೇಕತೆಯ ಸಮಯದಲ್ಲಿ ಅವರು ತಾಳಿಯನ್ನು ತೆಗೆದುಹಾಕಿದ್ದು ಮತ್ತು ದಾಖಲೆಯಲ್ಲಿ ಲಭ್ಯವಿರುವ ಹಲವಾರು ಇತರ ಪುರಾವೆಗಳನ್ನು ಗಮನಿಸಿದಾಗ ಪ್ರತಿವಾದಿಯು(ಪತ್ನಿ) ರಾಜಿ ಮಾಡಿಕೊಳ್ಳುವ ಮತ್ತು ವೈವಾಹಿಕ ಸಂಬಂಧ ಮುಂದುವರಿಸುವ ಉದ್ದೇಶವನ್ನು ಹೊಂದಿಲ್ಲ ಎಂಬ ಖಚಿತ ತೀರ್ಮಾನಕ್ಕೆ ಬರಲು ನಮಗೆ ಸಾಧ್ಯವಾಗಿದೆ’ಎಂದು ಪೀಠ ಹೇಳಿದೆ.