ಬೆಂಗಳೂರು: ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರ ದಾಳಿಯಿಂದ 26 ಪ್ರವಾಸಿಗರು ಬಲಿಯಾಗಿರುವ ಹೃದಯವಿದ್ರಾವಕ ಘಟನೆಗೆ ಪ್ರತಿಕ್ರಿಯಿಸುತ್ತಾ ಕಾಂಗ್ರೆಸ್ ಶಾಸಕ ಬಸವರಾಜ್ ರಾಯರೆಡ್ಡಿ ತೀವ್ರ ವಾಗ್ದಾಳಿ ನಡೆಸಿದ್ದು, ಭಾರತ ಪಾಕಿಸ್ತಾನದ ವಿರುದ್ಧ ಯುದ್ಧ ಆರಂಭಿಸಿದರೆ ಒಂದೇ ವಾರದಲ್ಲಿ ಪಾಕಿಸ್ತಾನ ಸಂಪೂರ್ಣವಾಗಿ ನಾಶವಾಗಲಿದೆ ಎಂದು ಹೇಳಿದರು.
ಬೆಂಗಳೂರು ನಗರದ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಪಾಕಿಸ್ತಾನದ ಉಗ್ರರು ಭಾರತದ ಗಡಿಗಳನ್ನು ದಾಟಿ ದಾಳಿ ನಡೆಸಿದುದು ಖಂಡನೀಯ ಎಂದು ನುಡಿದರು. ಈ ಘಟನೆಯ ನಂತರ ದೇಶದ ಭದ್ರತೆ ಬಗ್ಗೆ ಗಂಭೀರ ಚಿಂತೆ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ ಕೂಡ ಭದ್ರತಾ ವೈಫಲ್ಯವನ್ನು ಒಪ್ಪಿಕೊಂಡಿರುವುದಾಗಿ ಅವರು ಆರೋಪಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಈ ಘಟನೆಯನ್ನು ಖಂಡಿಸಿ, ಕೇಂದ್ರ ಸರ್ಕಾರವು ಭದ್ರತೆಯನ್ನು ಸುಧಾರಿಸಬೇಕೆಂದು ಆಗ್ರಹಿಸಿದ್ದಾರೆ. ಭದ್ರತೆ ಸುಧಾರಿಸಲು ಕೇಂದ್ರಕ್ಕೆ ಬೆಂಬಲ ನೀಡಲು ನಮ್ಮ ನಾಯಕರು ಸಿದ್ಧವಿದ್ದಾರೆ ಎಂದು ಶಾಸಕರು ಹೇಳಿದರು. ಆದರೆ, ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸುತ್ತಿರುವುದನ್ನು ಶಾಸಕರು ತೀವ್ರವಾಗಿ ಟೀಕಿಸಿದರು.
“ಅನಿವಾರ್ಯವಾಗಿದ್ರೆ ಇಂದೇ ಯುದ್ಧ ಆರಂಭಿಸಿ! ಉಗ್ರರ ಶಿಬಿರಗಳ ಮೇಲೆ ಬಾಂಬ್ ಹಾಕಿ!” ಎಂದು ಶಾಸಕರು ಕೇಂದ್ರ ಸರ್ಕಾರಕ್ಕೆ ಸವಾಲು ಎಸೆದಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ತಕ್ಷಣ ಕಾಶ್ಮೀರಕ್ಕೆ ಭೇಟಿ ನೀಡಬೇಕೆಂದು ಹಾಗೂ ವಿಶೇಷ ಸಂಸತ್ ಅಧಿವೇಶನ ಕರೆದು ಪಾಕಿಸ್ತಾನವನ್ನು ಉಗ್ರಗಾಮಿ ದೇಶವೆಂದು ಘೋಷಿಸಬೇಕೆಂದು ಆಗ್ರಹಿಸಿದರು.
ಭಾರತೀಯ ಸೇನೆಯಲ್ಲಿ 1 ಲಕ್ಷ 45 ಸಾವಿರ ಹುದ್ದೆಗಳು ಖಾಲಿಯಾಗಿವೆ ಎಂದು ಶಾಸಕರು ಹೇಳಿದ್ದು, ಪಾಕಿಸ್ತಾನದಿಂದ ಯಾವಾಗ ಏನು ಹಾನಿ ಸಂಭವಿಸುತ್ತದೆ ಎಂಬುದರ ಬಗ್ಗೆ ನಿರಂತರ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಭದ್ರತೆಯನ್ನು ಬಲಪಡಿಸಲು ತಕ್ಷಣ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕೆಂದು ಒತ್ತಾಯಿಸಿದರು.
ಸಿಂಧೂ ನದಿಯ ನೀರನ್ನು ಪಾಕಿಸ್ತಾನಕ್ಕೆ ಹರಿಬಿಡುವುದನ್ನು ತಕ್ಷಣ ನಿಲ್ಲಿಸಬೇಕೆಂಬ ಬೇಡಿಕೆಯನ್ನು ಶಾಸಕರು ಮುಂದಿಟ್ಟಿದ್ದಾರೆ. “ಸಿಂಧೂ ನದಿ ನಿಲ್ಲಿಸಿದರೆ, ನಮ್ಮ 6 ಉಪನದಿಗಳ ಮೂಲಕ ಜಲಹರಣ ನಡೆಸಬಹುದಾಗಿದೆ. ಇದರಿಂದ ಪಾಕಿಸ್ತಾನಕ್ಕೆ ಭಾರೀ ಹೊಡೆತ ನೀಡಬಹುದು,” ಎಂದು ಅವರು ಹೇಳಿದರು. ಪಾಕಿಸ್ತಾನದ ವಿರುದ್ಧ ಹೋರಾಟದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ತೀರ್ಮಾನವನ್ನೇ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಅನುಸರಿಸಬೇಕು ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಬಸವರಾಜ್ ರಾಯರೆಡ್ಡಿ ಹೇಳಿಕೆ ನೀಡಿದರು.














