ಮನೆ ರಾಜಕೀಯ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ರಾಜ್ಯಕ್ಕೆ ಸಮಗ್ರ ನೀರಾವರಿ ಸೌಲಭ್ಯ: ಹೆಚ್.ಡಿ.ಕುಮಾರಸ್ವಾಮಿ

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ರಾಜ್ಯಕ್ಕೆ ಸಮಗ್ರ ನೀರಾವರಿ ಸೌಲಭ್ಯ: ಹೆಚ್.ಡಿ.ಕುಮಾರಸ್ವಾಮಿ

0

ಮೊಳಕಾಲ್ಮೂರು (Molakalmuru)-ರಾಜ್ಯದಲ್ಲಿ ಜೆಡಿಎಸ್‌ ಆಳ್ವಿಕೆಗೆ ಜನತೆ ಅವಕಾಶ ಕೊಟ್ಟರೆ ರಾಜ್ಯಕ್ಕೆ ಸಮಗ್ರ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಹೇಳಿದರು.

ಮೊಳಕಾಲ್ಮೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನತಾ ಜಲಧಾರೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಜನತೆ ಆಳ್ವಿಕೆಗೆ ಅವಕಾಶ ಕೊಟ್ಟರೆ ರಾಜ್ಯಕ್ಕೆ ಸಮಗ್ರ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಈ ಯೋಜನೆಗಳ ಜಾರಿಗೆ ಎಷ್ಟು ಕೋಟಿ ಹಣ ಖರ್ಚಾದರೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಜನರಿಗೆ ನೀರನ್ನು ಒದಗಿಸುವುದೇ ನಮ್ಮ ಸಂಕಲ್ಪ. ಅದಕ್ಕಾಗಿ ಜನರಲ್ಲಿ ತಿಳಿವಳಿಕೆ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಜಗಳೂರಿನಲ್ಲಿ ಮುಖ್ಯಮಂತ್ರಿ ಕೆಲ ಕಾರ್ಯಕ್ರಮಗಳಿಗೆ ಚಾಲನೆ ಕೊಟ್ಟಿದ್ದಾರೆ. ಆದರೆ, ನಾನು ಮುಖ್ಯಮಂತ್ರಿ ಆಗಿದ್ದಾಗ ಜಗಳೂರು ಭಾಗಕ್ಕೆ ನೀರು ಕೊಡಲು, ಕೆರೆ ತುಂಬಲು ಯೋಜನೆ ರೂಪಿಸಿದ್ದೆ. ಅದಕ್ಕೆ ಬಿಜೆಪಿ ಈಗ ಅಡಿಗಲ್ಲು ಹಾಕಲು ಹೊರಟಿದೆ ಎಂದರು.

ನೀರಾವರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜ್ಯಕ್ಕೆ 75 ವರ್ಷಗಳಿಂದ ನಿರಂತರವಾಗಿ ಅನ್ಯಾಯವಾಗಿದೆ. ದೇವೇಗೌಡರು ಪ್ರಧಾನಿ ಆಗಿದ್ದ ಸಂದರ್ಭವನ್ನು ಹೊರತು ಪಡಿಸಿದರೆ ಉಳಿದೆಲ್ಲ ಸಂದರ್ಭಗಳಲ್ಲಿ ರಾಜ್ಯಕ್ಕೆ ಭಾರೀ ಅನ್ಯಾಯವಾಗಿದೆ ಎಂದು ಹೆಚ್‌ಡಿಕೆ ಕಿಡಿಕಾರಿದರು.

ಕೃಷ್ಣಾ ನದಿ ಯೋಜನೆಯನ್ನು ರಾಷ್ಟ್ರೀಯ ಯೊಜನೆ ಎಂದು ಘೋಷಿಸಿ ಎಂದು ರಾಜ್ಯ ಸರ್ಕಾರ ಈಗ ಕೇಳುತ್ತಿದೆ. ಆದರೆ, ಕೇಂದ್ರವು ರಾಜ್ಯದ ಜತೆಗೆ ಹೇಗೆ ನಡೆದುಕೊಂಡಿದೆ ಎಂಬುದನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಜನರ ಮುಂದೆ ಅನುಷ್ಠಾನಗೊಳಿಸಿ, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.