ಮನೆ ಕಾನೂನು ಮದುವೆ ಮುರಿದು ಬಿದ್ದರೆ ಅತ್ಯಾಚಾರ ಆರೋಪದಡಿ ವಿಚಾರಣೆ ಸಲ್ಲ: ಹೈಕೋರ್ಟ್‌

ಮದುವೆ ಮುರಿದು ಬಿದ್ದರೆ ಅತ್ಯಾಚಾರ ಆರೋಪದಡಿ ವಿಚಾರಣೆ ಸಲ್ಲ: ಹೈಕೋರ್ಟ್‌

0

ಬೆಂಗಳೂರು: ಮದುವೆ ಆಗುವುದಾಗಿ ಹೇಳಿ ಮಾತು ತಪ್ಪಿದ ಪ್ರಕರಣವನ್ನು ಅತ್ಯಾಚಾರ ಆರೋಪದಡಿ ವಿಚಾರಣೆಗೆ ಒಳಪಡಿಸುವುದು ಅವಿವೇಕತನ ಮತ್ತು ಕಾನೂನಿನ ದುರ್ಬಳಕೆ ಆಗಲಿದೆ ಎಂದು ಹೈಕೋರ್ಟ್‌ ಹೇಳಿದೆ.

Join Our Whatsapp Group

ಅಮೆರಿಕದಲ್ಲಿ ನೆಲೆಸಿರುವ ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮದ ಸಂತೋಷ್‌ ಶೆಟ್ಟಿ ವಿರುದ್ಧ ಅತ್ಯಾಚಾರ, ಮತ್ತವರ ಕುಟುಂಬದವರ ವಿರುದ್ಧ ವಂಚನೆ ಆರೋಪದಲ್ಲಿ ಕುಂದಾಪುರ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಪ್ರಕರಣದ ವಿಚಾರಣೆ ವೇಳೆ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಸಂತೋಷ್‌ ಶೆಟ್ಟಿ ವಿದೇಶಕ್ಕೆ ತೆರಳಿದ ಬಳಿಕ ದೂರುದಾರ ಮಹಿಳೆಯೊಂದಿಗೆ ಹಲವು ದಿನಗಳ ಕಾಲ ವಾಟ್ಸ್‌ ಆ್ಯಪ್‌ ಸಂಭಾಷಣೆ ನಡೆಸಿದ್ದಾರೆ. ಆದರೆ, ಎಲ್ಲಿಯೂ ಲೈಂಗಿಕ ಕ್ರಿಯೆಗೆ ಸಂಬಂಧಿಸಿದಂತೆ ಚರ್ಚಿಸಿಲ್ಲ. ದೂರುದಾರರು ಮತ್ತು ಅರ್ಜಿದಾರರ ನಡುವೆ ಹಲವು ವ್ಯತ್ಯಾಸಗಳು ಕಂಡುಬಂದಿದ್ದು, ಇದೇ ಕಾರಣದಿಂದ ನಿಶ್ಚಿತಾರ್ಥವೂ ಮುರಿದು ಬಿದ್ದಿರುತ್ತದೆ. ಪ್ರಕರಣದಲ್ಲಿ ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿಲ್ಲ. ಮದುವೆಯಾಗುವುದಾಗಿ ತಿಳಿಸಿದ್ದು, ಮುಂದಿನ ಪ್ರಕ್ರಿಯೆಗಳನ್ನು ಮುಂದುವರಿಸಲಾಗಿದೆ. ಕಾರಣಾಂತರ ಗಳಿಂದ ಭರವಸೆ ಈಡೇರಿಸಲು ಸಾಧ್ಯವಾಗದೆ ವಿವಾಹ ಮುರಿದು ಬಿದ್ದಿದೆ.

ಆದರೆ, ಅರ್ಜಿದಾರರ ಕುಟುಂಬ ದೂರುದಾರರಿಗೆ ಯಾವುದೇ ರೀತಿ ಯಲ್ಲಿಯೂ ಆಮಿಷ ನೀಡಿಲ್ಲ.

ಮದುವೆಗೂ ಮುನ್ನ ಆಗಿರುವ ನಿಶ್ಚಿತಾರ್ಥ ಮುರಿದು ಬಿದ್ದ ಪರಿಣಾಮ ವಿವಾಹ ರದ್ದಾಗಿದೆ. ಆದ್ದರಿಂದ ಈ ಪ್ರಕರಣ ವಂಚನೆ ಆರೋಪದಲ್ಲಿಯೂ ಬರುವುದಿಲ್ಲ. ಹೀಗಾಗಿ ಈ ಪ್ರಕರಣ ಮುಂದುವರಿಕೆಗೆ ಅವಕಾಶ ನೀಡಿದ್ದಲ್ಲಿ ಕಾನೂನಿನ ದುರುಪಯೋಗವಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ ಅರ್ಜಿಯನ್ನು ಪುರ ಸ್ಕರಿಸಿದ್ದು, ಪ್ರಕರಣ ರದ್ದುಪಡಿಸಿ ಆದೇಶಿಸಿದೆ.

ಸಂತೋಷ್‌ ಶೆಟ್ಟಿ ಅವರು ಶೆಟ್ಟಿ ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ನಲ್ಲಿ ತಮ್ಮ ವಿವರವನ್ನು ಸಲ್ಲಿಸಿದ್ದರು. ಅನಂತರ ಅವರ ಸಂಪರ್ಕಕ್ಕೆ ಕುಂದಾಪುರ ತಾಲೂಕಿನ ಮಹಿಳೆಯೊಬ್ಬರು ಬಂದಿದ್ದು, ಇಬ್ಬರೂ ಮಾತುಕತೆ ಮುಂದುವರಿಸಿದ್ದರು. 2023ರ ಜನವರಿ 8ರಂದು ಹಕ್ಲಾಡಿಯ ದೇವಾಲಯದಲ್ಲಿ ಭೇಟಿಯಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಬಳಿಕ ಎರಡೂ ಕುಟುಂಬದ ನಡುವೆ ಮಾತುಕತೆ ನಡೆದು, ಮದುವೆಯ ಪ್ರಸ್ತಾಪ ಬಂದು ಎರಡೂ ಕುಟಂಬಗಳ ಸದಸ್ಯರು ಒಪ್ಪಿ 2023ರ ಜನವರಿ 11ರಂದು ನಿಶ್ಚಿತಾರ್ಥ ಕಾರ್ಯಕ್ರಮವನ್ನು ನಡೆಸಿದ್ದರು. ಆದರೆ, ಕಾರಣಾಂತರಗಳಿಂದ ನಿಶ್ಚಿತಾರ್ಥವು ಮುರಿದು ಬಿದ್ದಿತ್ತು. ಮದುವೆ ನಿಶ್ಚಯವೂ ರದ್ದಾಗಿತ್ತು. ಏಳು ತಿಂಗಳ ಅನಂತರ ಯುವತಿ ಕುಂದಾಪುರ ಪೊಲೀಸರಿಗೆ ದೂರು ನೀಡಿ, ಸಂತೋಷ್‌ ಶೆಟ್ಟಿ ನಿಶ್ಚಿತಾರ್ಥದ ದಿನ ಸಂಜೆ ಆರು ಗಂಟೆಗೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನನ್ನ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ಅತ್ಯಾಚಾರ ಆರೋಪದಲ್ಲಿ ದೂರು ದಾಖಲಿಸಿದ್ದರು. ಅಲ್ಲದೆ, ವಿವಾಹ ಮಾಡುವುದಾಗಿ ಭರವಸೆ ನೀಡಿ ಬಳಿಕ ನಿರಾಕರಿಸಿದ್ದಾರೆ ಎಂದು ಸಂತೋಷ್‌ ಶೆಟ್ಟಿ ಕುಟುಂಬಸ್ಥರ ವಿರುದ್ಧ ವಂಚನೆ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ದೂರಿನ ಕುರಿತು ತನಿಖೆ ನಡೆಸಿದ್ದ ಪೊಲೀಸರು ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಹಿಂದಿನ ಲೇಖನಪುರಿಯ ಶ್ರೀ ಜಗನ್ನಾಥ ದೇವಾಲಯದ 4 ದ್ವಾರಗಳು ಭಕ್ತರಿಗೆ ಮುಕ್ತ
ಮುಂದಿನ ಲೇಖನಕಲಾವಿದರ ಸಂಘದ ಜತೆ ಚರ್ಚಿಸಿದ ಬಳಿಕ ದರ್ಶನ್​​ ವಿರುದ್ಧ ಕ್ರಮ: ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ