ಮೈಸೂರು: ಸಹಕಾರ ಸಂಸ್ಥೆಗಳು ಹಾಗೂ ಸಹಕಾರ ಬ್ಯಾಂಕ್ ಗಳಲ್ಲಿ ಯಾವುದೇ ರೀತಿಯ ಹಣ ದುರುಪಯೋಗ ಕಂಡುಬಂದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವರಾದ ಕೆ ಎನ್ ರಾಜಣ್ಣ ಅವರು ತಿಳಿಸಿದರು
ಇಂದು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮೈಸೂರು ಪ್ರಾಂತ್ಯದ ಇಲಾಖಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದು ಮೈಸೂರು ವಿಭಾಗದ 8 ಜಿಲ್ಲೆಗಳ ಸಹಕಾರ ಸಂಘಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಹಮ್ಮಿಕೊಳ್ಳಲಾಗಿದೆ. ಬ್ಯಾಂಕ್ ಸಿಬ್ಬಂದಿಗಳು ಪರಿಶೀಲನೆ ಮಾಡಿ ಸಾಲ ವಿತರಣೆ ಮಾಡಬೇಕು. ಎಲ್ಲಾ ಸಿಬ್ಬಂದಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ಇರಬೇಕು. ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಪಾಸ್ ವರ್ಡ್ ಗಳು ದುರುಪಯೋಗ ಆಗಬಾರದು. ಯಾವುದೇ ಅಧಿಕಾರಿಗಳ ಮೇಲೆ ಹಣ ದುರುಪಯೋಗದ ದೂರುಗಳು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಹಿಂದಿನ ಹಣ ದುರುಪಯೋಗದ ಪ್ರಕರಣಗಳು ಇದ್ದರೆ ಪ್ರಕರಣಗಳನ್ನು ಬೇಗ ಇತ್ಯರ್ಥ ಪಡಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಹಕಾರ ಇಲಾಖೆಯಲ್ಲಿ ಹಣ ದುರುಪಯೋಗದ ಕುರಿತು ದಾಖಲಾಗಿರುವ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣ ಗಳ ಕುರಿತು ಮಾಹಿತಿ ಪಡೆದುಕೊಂಡ ಸಚಿವರು ತುಂಬಾ ಪ್ರಕರಣಗಳು ಇನ್ನೂ ಇತ್ಯರ್ಥ ಆಗದೆ ಹಾಗೆ ಉಳಿದಿದ್ದು, ಕೆಲವು ಅಧಿಕಾರಿಗಳು ಕೋರ್ಟ್ ಪ್ರಕರಣಗಳಿಗೆ ಸರಿಯಾಗಿ ಹಾಜರು ಆಗುವುದಿಲ್ಲ, ಈ ರೀತಿ ಆಗಬಾರದು ಸಂಬಂಧಿಸಿದ ಅಧಿಕಾರಿಗಳು ಕೋರ್ಟ್ ಪ್ರಕರಣಗಳಿಗೆ ಸೂಕ್ತ ದಾಖಲೆಗಳೊಂದಿಗೆ ಹಾಜರಾಗಿ ತಪ್ಪಿತಸ್ಥರಿಗೆ ಶಿಕ್ಷೆ ಯಾಗುವಂತೆ ನೋಡಿಕೊಳ್ಳಿ. ಇದರಿಂದ ಸಹಕಾರ ಸಂಸ್ಥೆಗಳಲ್ಲಿ ಅಕ್ರಮವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಹಕಾರ ಸಂಸ್ಥೆಗಳಿಂದ ವಿತರಿಸುವ ಸಾಲ ವಸೂಲಾತಿ ಮಾಡುವಲ್ಲಿ ಅಧಿಕಾರಿಗಳು ಕಾನೂನು ರೀತಿ ಕ್ರಮ ವಹಿಸಬೇಕು. ಅಧಿಕಾರಿಗಳು ಕೇವಲ ಕಚೇರಿಯಲ್ಲಿ ಮಾತ್ರ ಇರದೆ ಪೀಲ್ಡ್ ನಲ್ಲಿಯೂ ಹೋಗಿ ಕಾರ್ಯ ನಿರ್ವಹಿಸಬೇಕು. ಸಹಕಾರ ಸಂಸ್ಥೆಗಳಿಂದ ಹೆಚ್ಚಾಗಿ ರೈತರು, ಮಹಿಳೆಯರು ಸಾಲ ಸೌಲಭ್ಯ ಪಡೆಯುತ್ತಾರೆ. ಸಹಕಾರ ಸಂಸ್ಥೆಗಳಲ್ಲಿ ಕಾಲ ಕಾಲಕ್ಕೆ ಆಡಿಟ್ ಗಳು ನಡೆಯುತ್ತಿರಬೇಕು ಎಂದು ಸೂಚಿಸಿದರು.
ಕಾಟ್ಲಾ ಮೀನಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಹೆಚ್ಚಿನ ಮೀನು ಮರಿಗಳನ್ನು ಬಿಟ್ಟು ಉತ್ಪಾದನೆ ಮಾಡುವಂತೆ, ಸಹಕಾರ ಮೀನು ಉತ್ಪಾದಕ ಸಂಘಗಳಿಗೆ ತಿಳಿಸಿದರು. ಹಾಲು ಉತ್ಪಾದನೆಯನ್ನು ಹೆಚ್ಚಳ ಮಾಡಬೇಕು. ಪಶು ಆಹಾರಗಳ ಬೆಲೆಗಳು ಹೆಚ್ಚಳವಾಗಿದೆ ಹಾಗೂ ಪಶುಗಳಿಗೆ ಗಂಟು ರೋಗಗಳು ಬಂದು ಹಾಲು ಉತ್ಪಾದನೆ ಕುಂಠಿತವಾಗಿತ್ತು. ಹಾಲು ಉತ್ಪಾದಕ ರೈತರ ಖಾತೆಗಳಿಗೆ ಸಕಾಲದಲ್ಲಿ ಸಬ್ಸಿಡಿ ಹಣ ತಲುಪಬೇಕು. ಪಶುಗಳಿಗೆ ವಿಮೆ ಮಾಡಿಸಬೇಕು. ನಂದಿನಿ ತುಪ್ಪಕ್ಕೆ ಹೆಚ್ಚಿನ ಬೇಡಿಕೆ ಇದೆ. ತಿರುಪತಿ ದೇವಸ್ಥಾನದ ಲಾಡು ತಯಾರಿಸಲು ನಂದಿನಿ ತುಪ್ಪಕ್ಕೆ ಬೇಡಿಕೆ ಇದ್ದು, ಹೆಚ್ಚಿನ ತುಪ್ಪವನ್ನು ಉತ್ಪಾದನೆ ಮಾಡುವಂತೆ ಹಾಲು ಒಕ್ಕೂಟ ಗಳಿಗೆ ಸಲಹೆ ನೀಡಿದರು.
ಸಹಕಾರ ಸಂಸ್ಥೆಗಳ ವತಿಯಿಂದ ಪ್ರತಿ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಹಾಸ್ಟೆಲ್ ಗಳ ತೆರೆಯಿರಿ. ಡಿಸೆಂಬರ್ ಒಳಗೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ತೆರೆಯಬೇಕು. ಜನಔಷದಿ ಕೇಂದ್ರಗಳನ್ನು ಸಹಕಾರಿ ಸಂಘಗಳ ಸಹಯೋಗದೊಂದಿಗೆ ತೆರೆಯಲು ಪ್ರಾಯೋಗಿಕ ಪರೀಕ್ಷೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ ಪ್ರಮುಖ ಉದ್ಯೋಗವಾಗಿದೆ. ಹಾಲು ಉತ್ಪಾದನೆ ವೆಚ್ಚವನ್ನು ಕಡಿಮೆ ಮಾಡುವ ಕ್ರಮಗಳನ್ನು ಕೈಗೊಳ್ಳಬೇಕು ಆಗ ಮಾತ್ರ ಹಾಲು ಉತ್ಪಾದಕರಿಗೆ ಹೆಚ್ಚಿನ ಲಾಭ ದೊರೆಯಲು ಸಾಧ್ಯ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಸಹಕಾರ ಸಂಘಗಳ ರಿಜಿಸ್ಟಾರ್ ಕ್ಯಾಪ್ಟನ್ ರಾಜೇಂದ್ರ, ಮೈಸೂರು ಪ್ರಾಂತ್ಯದ ವಿವಿಧ ಸಹಕಾರ ಸಂಸ್ಥೆಗಳು ಹಾಗೂ ಬ್ಯಾಂಕ್ ಗಳ ಅಧಿಕಾರಿಗಳು ಉಪಸ್ಥಿತರಿದ್ದರು.