ಮನೆ ಕಾನೂನು ಅಪಘಾತದಲ್ಲಿ ಪೋಷಕರು ಮೃತಪಟ್ಟರೆ, ವಿವಾಹಿತ ಪುತ್ರಿಗೂ ಪರಿಹಾರ: ಹೈಕೋರ್ಟ್

ಅಪಘಾತದಲ್ಲಿ ಪೋಷಕರು ಮೃತಪಟ್ಟರೆ, ವಿವಾಹಿತ ಪುತ್ರಿಗೂ ಪರಿಹಾರ: ಹೈಕೋರ್ಟ್

0

ಬೆಂಗಳೂರು(Bengaluru): ರಸ್ತೆ ಅಪಘಾತದಲ್ಲಿ ಪೋಷಕರು ಮೃತಪಟ್ಟರೆ ಅಂತಹ ಸಂದರ್ಭಗಳಲ್ಲಿ ಮೋಟಾರು ವಾಹನ ಕಾಯ್ದೆಯಡಿ ಪುತ್ರಿಗೂ ಪರಿಹಾರ ಕೇಳುವ ಹಕ್ಕಿದೆ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಪರಿಹಾರದ ವಿಷಯದಲ್ಲಿ ಪುತ್ರ ಅಥವಾ ಪುತ್ರಿ ಎಂದು ತಾರತಮ್ಯ ಎಸಗಲಾಗದು, ವಿಮಾ ಕಂಪನಿಗಳಿಂದ ವಿವಾಹಿತ ಪುತ್ರಿಯೂ ಪರಿಹಾರ ಕೇಳಲು ಅರ್ಹರಾಗಿರುತ್ತಾರೆ ಎಂದು ನ್ಯಾ. ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯಪೀಠ ಧಾರವಾಡ ಪೀಠದ ವ್ಯಾಪ್ತಿಯ ಮೋಟಾರು ವಾಹನ ಅಪಘಾತ ಪ್ರಕರಣದಲ್ಲಿ ಆದೇಶಿಸಿದೆ.

ಮೋಟಾರು ವಾಹನ ಅಪಘಾತ ಕ್ಲೈಮ್ ಮಂಡಳಿ 2014ರ ಮೇ 9ರಂದು ನೀಡಿದ್ದ ಆದೇಶ ಪ್ರಶ್ನಿಸಿ ರಿಲಯನ್ಸ್ ಜನರಲ್ ಇನ್ಪೂರೆನ್ಸ್ ಕಂಪನಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ನ್ಯಾಯಾಲಯ ಈ ಆದೇಶವನ್ನು ಹೊರಡಿಸಿದೆ.

ಪರಿಹಾರ ನೀಡುವಾಗ ಮೋಟಾರು ವಾಹನ ಪರಿಹಾರ ನ್ಯಾಯಮಂಡಳಿ ಪರಿಹಾರ ನೀಡುವಾಗ ಕಾನೂನು ಪ್ರಕಾರ ಉತ್ತರಾದಿಕಾರಿಗಳು ಪುತ್ರ ಅಥವಾ ಪುತ್ರಿ ಅವರು ಮದುವೆಯಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಬಾರದು. ಮೃತ ಪೋಷಕರ ವಿವಾಹವಾದ ಪುತ್ರಿಯರು ಪರಿಹಾರಕ್ಕೆ ಅರ್ಹರಲ್ಲ ಎಂಬುದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೆ, ಸಾಂಪ್ರದಾಯಿಕವಾಗಿ ಕುಟುಂಬದ ಮುಖ್ಯಸ್ಥರು ಯಾರು ಎಂಬ ಗೋಜಿಗೆ ಹೋಗದೆ, ಎಲ್ಲ ರೀತಿಯಲ್ಲೂ ವಿವಾಹಿತ ಪುತ್ರರಂತೆ, ವಿವಾಹವಾಗಿರುವ ಪುತ್ರಿಯರೂ ಸಹ ಪರಿಹಾರ ಪಡೆಯಲು ಅರ್ಹರು, ಅವರ ನಡುವೆ ತಾರತಮ್ಯ ಸಲ್ಲ ಎಂದು ನ್ಯಾಯಪೀಠ ಆದೇಶಿಸಿದೆ.

ಸುಪ್ರೀಂ ತೀರ್ಪು ಉಲ್ಲೇಖ: ನ್ಯಾಯಪೀಠ ತೀರ್ಪು ನೀಡುವಾಗ ಸುಪ್ರೀಂಕೋರ್ಟ್ ನ್ಯಾಷನಲ್ ಇನ್ಪುರೆನ್ಸ್ ಕಂಪನಿ ಲಿಮಿಟೆಡ್ ವರ್ಸಸ್ ಅದರ್ಸ್ ಪ್ರಕರಣದಲ್ಲಿ ನೀಡಿರುವ ತೀರ್ಪು ಉಲ್ಲೇಖಿಸಿ,

ಅಪಘಾತದಲ್ಲಿ ಮೃತಪಟ್ಟ ಪೋಷಕರು ಉತ್ತರಾಧಿಕಾರಿಗಳು ಅಂದರೆ ಪುತ್ರ ಅಥವಾ ಪುತ್ರಿ ಕಾನೂನು ಪ್ರಕಾರ ಪರಿಹಾರ ಕೇಳುವ ಹಕ್ಕು ಹೊಂದಿದ್ದಾರೆ. ಅಲ್ಲದೆ, ವಿವಾಹಿತ, ವಯಸ್ಕ ಮತ್ತು ದುಡಿಯುವ ಪುತ್ರರೂ ಸಹ ಪರಿಹಾರ ಧನವನ್ನು ಕೋರಲು ಅರ್ಹರಾಗಿರುತ್ತಾರೆ. ಆಗ ಪರಿಹಾರ ನಿಗದಿಪಡಿಸುವ ನ್ಯಾಯಮಂಡಳಿಗಳು, ಉತ್ತರಾಧಿಕಾರಿಗಳು ಪರಿಹಾರಕ್ಕೆ ಅರ್ಹರಾಗಿದ್ದಾರೆಯೇ ಇಲ್ಲವೇ ಎಂಬುದನ್ನು ನಿರ್ಧರಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ. ಚಾಲಕನ ನಿರ್ಲಕ್ಷ್ಯ: ಅಪಘಾತಕ್ಕೆ ಟೆಂಪೋ ಚಾಲಕನ ನಿರ್ಲಕ್ಷ್ಯ ಕಾರಣ, ಆದರೆ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಮಂಡಳಿ ಅದನ್ನು ಪರಿಗಣಿಸಿಲ್ಲ ಎಂದು ವಿಮಾ ಕಂಪನಿ ವಾದ ಮಂಡಿಸಿತ್ತು. ಆದರೆ ವಿಮಾ ಕಂಪನಿ, ಅಪಘಾತಕ್ಕೀಡಾದ ವಾಹನದ ಚಾಲಕನನ್ನು ವಿಚಾರಣೆಗೊಳಪಡಿಸಿಲ್ಲ, ನಿರ್ಲಕ್ಷ್ಯದ ಬಗ್ಗೆ ಕೇಳಲು ಆತನೇ ಸರಿಯಾದ ವ್ಯಕ್ತಿ, ಜೊತೆಗೆ ವಿಮಾ ಕಂಪನಿ ತನ್ನ ವಾದವನ್ನು ಪುಷ್ಠೀಕರಿಸಲು ವಿಮಾ ಕಂಪನಿಯ ಅಧಿಕೃತ ಸಾಕ್ಷ್ಯವನ್ನೂ ಸಹ ವಿಚಾರಣೆಗೊಳಪಡಿಸಿಲ್ಲ ಎಂದು ವಿಮಾ ಕಂಪನಿಯ ವಾದವನ್ನು ಸಾರಾಸಗಟಾಗಿ ತಳ್ಳಿಹಾಕಿದೆ. ವಿಮಾ ಕಂಪನಿಯೇ ಚಾಲಕನ ನಿರ್ಲಕ್ಷ್ಯವನ್ನು ಸಾಬೀತುಪಡಿಸಲು ವಿಫಲವಾದ ಮೇಲೆ ಅದು ಹೇಗೆ ಎಂಎಸಿಟಿ ತನ್ನ ವಾದ ಪರಿಗಣಿಸಿಲ್ಲವೆಂದು ಹಕ್ಕು ಮಂಡಿಸಲಾಗುತ್ತದೆ ಎಂದು ಹೈಕೋರ್ಟ್ ಪ್ರಶ್ನಿಸಿದೆ.

ರೇಣುಕಾ ಎಂಬುವರು 2012ರ ಏ,12ರಂದು ಹುಬ್ಬಳ್ಳಿಗೆ ಮದುವೆಗೆಂದು ಟೆಂಪೋದಲ್ಲಿ ತೆರಳುತ್ತಿದ್ದರು, ಆಗ ಯಮನೂರು ಬಳಿ ಎದುರಿನಿಂದ ಬರುತ್ತಿದ್ದ ಲಾರಿ ಟೆಂಪೋಗೆ ಢಿಕ್ಕಿ ಹೊಡೆದ ಪರಿಣಾಮ ರೇಣಕಾ ಗಾಯಗೊಂಡರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಅವರು ಬದುಕುಳಿಯಲಿಲ್ಲ. ಅವರ ಪುತ್ರಿ ಪರಿಹಾರ ಕೋರಿದ್ದರು.