ಬೆಂಗಳೂರು : ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಕೇಸ್ ದಾಖಲಿಸಲು ನಿರಾಕರಿಸಿದರೆ, ದೂರುದಾರರು ಬಿಎನ್ಎಸ್ ಕಾಯ್ದೆಯಡಿ ನೇರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಬಹುದು ಎಂದು ಹೈಕೋರ್ಟ್ ಹೇಳಿದೆ. ರಿಯಲ್ ಎಸ್ಟೇಟ್ನಲ್ಲಿ ಸಹೋದರನಿಂದ ವಂಚನೆ ಎಂದು ನಗರದ ನಿವಾಸಿ ಬಿ.ಎಚ್.ನಾಗರಾಜು ನೀಡಿದ್ದ ದೂರು ಸ್ವೀಕರಿಸಲು ಪೊಲೀಸರು ನಿರಾಕರಿಸಿದ್ದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಆಲಿಸಿದ ನ್ಯಾ.ಸೂರಜ್ ಗೋವಿಂದರಾಜು ಅವರಿದ್ದ ಏಕಸದಸ್ಯ ಪೀಠ ಆದೇಶಿಸಿದೆ.
ಪೊಲೀಸ್ ಠಾಣೆಯಲ್ಲಿ ದೂರು ತಿರಸ್ಕರಿಸಿದರೆ ದೂರುದಾರರು ನೇರವಾಗಿ ಹೈಕೋರ್ಟ್ ಸಂಪರ್ಕಿಸಬಹುದಾಗಿದೆ. ದೂರು ತಿರಸ್ಕರಿಸಿದರ ವಿರುದ್ಧ ಉನ್ನತ ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸುವ ಅಗತ್ಯ ಇಲ್ಲ. ಒಂದು ವೇಳೆ ಉನ್ನತ ಅಧಿಕಾರಿಯೂ ಆ ದೂರು ತಿರಸ್ಕರಿಸಿದರೆ, ಆ ವ್ಯಾಪ್ತಿಯ ಮ್ಯಾಜಿಸ್ಟ್ರೇಟ್ ಎದುರು ಖಾಸಗಿ ದೂರು ದಾಖಲಿಸಲು ಕೂಡ ನಿಯಮಗಳಲ್ಲಿ ಅವಕಾಶವಿದೆ ಎಂದು ಹೈಕೋರ್ಟ್ ತನ್ನ ಆದೇಶವನ್ನು ತಿಳಿಸಿದೆ.
ಇದೇ ವೇಳೆ ಅರ್ಜಿದಾರ ಬಿ.ಎಚ್.ನಾಗರಾಜು ಸಲ್ಲಿಸಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲು ನ್ಯಾಯಾಲಯ ನಗರ ಪೊಲೀಸರಿಗೆ ನಿರ್ದೇಶನ ನೀಡಿದೆ. ಸಿವಿಲ್ ವ್ಯಾಜ್ಯ ಎಂದಿದ್ದ ಪೊಲೀಸರು; ನಾಗರಾಜು ಸಲ್ಲಿಸಿದ್ದ ದೂರು ಸಿವಿಲ್ ಸ್ವರೂಪದ ಪ್ರಕರಣವಾಗಿದೆ. ಇದನ್ನು ಸೂಕ್ತ ನ್ಯಾಯಾಲಯದಲ್ಲಿ ಸಲ್ಲಿಸಿ ಪರಿಹರಿಸಬೇಕಾಗಿದೆ ಎಂದು ಪೊಲೀಸರು ನಾಗರಾಜು ನೀಡಿದ್ದ ದೂರಿಗೆ ಹಿಂಬರಹ ನೀಡಿದ್ದರು.















