ಬೆಂಗಳೂರು(Bengaluru): ಇನ್ನು ಮುಂದೆ ನಾಲಿಗೆ ಹರಿಬಿಟ್ಟು ಮಾತನಾಡಿದರೆ ನಾಲಿಗೆ ಕತ್ತರಿಸುವ ಕೆಲಸ ಮಾಡಬೇಕಾಗುತ್ತದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬಹಿರಂಗ ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರೇಸ್‍ಕೋರ್ಸ್ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರದವರು ಒಬ್ಬರಿದ್ದಾರೆ. ಅವರು ಎಲುಬಿಲ್ಲದ ನಾಲಿಗೆ ಇಲ್ಲದೆ ಮಾತನಾಡುತ್ತಿದ್ದಾರೆ. ಅಪ್ಪನಿಗೆ ಹುಟ್ಟಿದವರು ಈ ರೀತಿ ಮಾತನಾಡುವುದಿಲ್ಲ ಎಂದು ತಿರುಗೇಟು ನೀಡಿದರು.
ಪದೇ ಪದೇ ಒಬ್ಬರನ್ನು ಹಿಯಾಳಿಸಿ ಮಾತನಾಡುವುದು, ಬಾಯಿಗೆ ಬಂದಂತೆ ಟೀಕೆ ಮಾಡುವುದು ಅವರಿಗೆ ಅಭ್ಯಾಸವಾಗಿಬಿಟ್ಟಿದೆ. ಬಾಯಿ ಮುಚ್ಚಿಕೊಂಡು ಸುಮ್ಮನಿದ್ದರೆ ಒಳ್ಳೆಯದು. ಇಲ್ಲದಿದ್ದರೆ ನಾವು ಕೂಡ ಅದೇ ದಾಟಿಯಲ್ಲಿ ಮಾತನಾಡಬೇಕಾಗುತ್ತದೆ. ನಾಲಿಗೆ ಉದ್ದ ಇದೆ ಎಂದು ಚಾಚಿದರೆ ಕತ್ತರಿಸುವ ಕೆಲಸವೂ ನಮಗೆ ಗೊತ್ತಿದೆ ಎಂದು ಎಚ್ಚರಿಕೆ ಕೊಟ್ಟರು.
ಬಿಜೆಪಿಗೆ ಬಂದ ಮೇಲೆ ಮುಸ್ಲಿಂರ ವಿರುದ್ಧ ಮಾತನಾಡುವುದು, ಹಿಂದುತ್ವದ ಬಗ್ಗೆ ಮಾತನಾಡುವುದು ಇವರಿಗೆ ಛಾಳಿಯಾಗಿದೆ. ಒಂದು ರಾಜಕೀಯ ಪಕ್ಷಕ್ಕೆ ಸೇರಿದ ಮೇಲೆ ಆ ಪಕ್ಷದ ಶಿಸ್ತು ಚೌಕಟ್ಟಿಗೆ ಬದ್ದರಾಗಿರಬೇಕು ಎಂದರು.
ಜೆಡಿಎಸ್’ಗೆ ಹೋದಾಗ ಟಿಪ್ಪು ಟೋಪಿ ಹಾಕುತ್ತಾರೆ. ಬಿಜೆಪಿಗೆ ಬಂದಾಗ ಅದೇ ಟಿಪ್ಪು ಟೋಪಿಯನ್ನು ವಿರೋಧಿಸುತ್ತಾರೆ. ಇವರಿಗೆ ಯಾವ ಬದ್ದತೆ ಇದೆ. ಇಂಥವರಿಂದ ನಾವು ನೈತಿಕತೆ ಪಾಠ ಕಲಿಯಬೇಕೆ ಎಂದು ಪ್ರಶ್ನಿಸಿದರು.
ಇನ್ನೊಬ್ಬರ ಚಾರಿತ್ರ್ಯ ಬಗ್ಗೆ ಮಾತನಾಡುವ ಈ ಮಹಾನುಭಾವರು ನ್ಯಾಯಾಲಯದಲ್ಲಿ ಏಕೆ ತಡೆಯಾಜ್ಞೆ ತಂದಿದ್ದಾರೆ? ತಾಕತ್ತಿದ್ದರೆ ಮೊದಲು ತಡೆಯಾಜ್ಞೆಯನ್ನು ತೆರವುಗೊಳಿಸಲಿ ಎಂದು ಸವಾಲು ಹಾಕಿದರು.
ನಾವು ಪಕ್ಷದ ನಿಯಮವನ್ನು ಮೀರಿ ಮಾತನಾಡಬಾರದು. ಪಕ್ಷ ತಾಯಿ ಸಮಾನ. ಎಷ್ಟೇ ಅಸಮಾಧಾನವಿದ್ದರೂ ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ. ಒಂದು ವೇಳೆ ಪಕ್ಷದಲ್ಲಿರಲು ಸಾಧ್ಯವಿಲ್ಲ ಎಂದಾದರೆ ರಾಜೀನಾಮೆ ಕೊಟ್ಡು ಹೊರಗೆಹೋಗಿ ಪ್ರತಿಭಟನೆ ಮಾಡಲಿ ಎಂದು ಸಚಿವ ನಿರಾಣಿ ಯತ್ನಾ’ಳ್‍ಗೆ ಸವಾಲು ಹಾಕಿದರು.
ವೀರಶೈವ, ಲಿಂಗಾಯತ ಸಮುದಾಯಕ್ಕೆ 2ಎ ಕೊಡಬೇಕೆಂಬ ಬೇಡಿಕೆ ಇಂದು, ನೆನ್ನೆಯದಲ್ಲ. ಈ ಹೋರಾಟದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ತಮ್ಮ ಅಧಿಕಾರ ಅವಧಿಯಲ್ಲಿ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಿದ್ದರು. ಅದರ ಪ್ರತಿಫವಾಗಿಯೇ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡಲು ಸೂಚನೆ ಕೊಟ್ಟಿದ್ದರು. ಆದರೆ ಅವರ ವಿರುದ್ಧವೂ ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಅವರು ಎಂದೂ ಕೂಡ ಮೀಸಲಾತಿ ನೀಡಲು ವಿರೋಧಿಸಿಲ್ಲ. ಇದು ಕೆಲವರು ಸೃಷ್ಟಿಸಿರುವ ಷಡ್ಯಂತ್ರ ಎಂದು ಅಸಮಾಧಾನ ಹೊರಹಾಕಿದರು.