ಮನೆ ಕಾನೂನು ‘ನಿಮ್ಮಂಥ ತ್ರಿಕಾಲ ಜ್ಞಾನ ಸ್ವಾಮೀಜಿ ಹೀಗೆ ಮಾಡಿದರೆ ಸಂಸ್ಥೆ ಎಲ್ಲಿಗೆ ಹೋಗಬೇಕು?’ : ಸ್ವಾಮೀಜಿಗೆ ಹೈಕೋರ್ಟ್‌...

‘ನಿಮ್ಮಂಥ ತ್ರಿಕಾಲ ಜ್ಞಾನ ಸ್ವಾಮೀಜಿ ಹೀಗೆ ಮಾಡಿದರೆ ಸಂಸ್ಥೆ ಎಲ್ಲಿಗೆ ಹೋಗಬೇಕು?’ : ಸ್ವಾಮೀಜಿಗೆ ಹೈಕೋರ್ಟ್‌ ತರಾಟೆ

0

ನ್ಯಾಯಾಲಯ ಮತ್ತು ನ್ಯಾಯಮೂರ್ತಿಗಳ ಬಗ್ಗೆ ಉಪೇಕ್ಷೆಯಿಂದ ಮಾತನಾಡಿದ್ದ ಸ್ವಾಮೀಜಿ ಒಬ್ಬರನ್ನು ತೀವ್ರ ತರಾಟೆಗೆ ಗುರಿಪಡಿಸಿದ ಕರ್ನಾಟಕ ಹೈಕೋರ್ಟ್‌ “ನಿಮ್ಮಂಥ ತ್ರಿಕಾಲ ಜ್ಞಾನ ಸ್ವಾಮೀಜಿಗಳು ಹೀಗೆ ಮಾಡಿದರೆ ಸಂಸ್ಥೆ (ನ್ಯಾಯಾಲಯ) ಎಲ್ಲಿಗೆ ಹೋಗಬೇಕು?” ಎಂದು ಕಟುವಾಗಿ ಮೌಖಿಕವಾಗಿ ಪ್ರಶ್ನಿಸಿತು.

ಶಿವಮೊಗ್ಗ ಜಿಲ್ಲೆಯ ಹೊನ್ನಳ್ಳಿ ತಾಲ್ಲೂಕಿನ ರಾಮಲಿಂಗೇಶ್ವರ ಮಠ ಪೀಠಾಧಿಪತಿ ಜಗದ್ಗುರು ಶ್ರೀ ನೀಲಕಂಠ ಸಾರಂಗ ದೇಶಿಕೇಂದ್ರ ಮಹಾಸ್ವಾಮೀಜಿ ಅವರ ವಿರುದ್ಧ ದಾಖಲಿಸಿಕೊಳ್ಳಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ಪುರಸ್ಕರಿಸಿತು.

ನ್ಯಾ. ದೀಕ್ಷಿತ್‌ ಅವರು “ನ್ಯಾಯಾಲಯದ ಬಗ್ಗೆ ಹಗುರವಾಗಿ ಮಾತನಾಡಿದ್ದನ್ನು ಸಾಮಾನ್ಯ ಮನುಷ್ಯ ಮಾಡಿದ್ದರೆ ಅದನ್ನು ನಾವು ಅರ್ಥ ಮಾಡಿಕೊಳ್ಳುತ್ತಿದ್ದೆವು. ಇವರೆಲ್ಲ ತ್ರಿಕಾಲ ಜ್ಞಾನ ಸ್ವಾಮೀಜಿಗಳು. ಇಂಥ ತ್ರಿಕಾಲ ಸ್ವಾಮೀಜಿಗಳು ಈ ರೀತಿ ಮಾಡಿದರೆ ಸಂಸ್ಥೆ ಎಲ್ಲಿಗೆ ಹೋಗಬೇಕು? ಮುಂದಿನ ಜನಾಂಗಕ್ಕಾಗಿ ಈ ಸಂಸ್ಥೆ ರಕ್ಷಿಸಬೇಕು” ಎಂದರು.

 “ಹಿಂದೂ ಧರ್ಮ ಇತ್ಯಾದಿ ನಂಬಿಕೆಗಳನ್ನು ಪಾಲಿಸುವಲ್ಲಿ ನೀವು ತುಂಬಾ ಬ್ಯುಸಿ ಇರುತ್ತೀರಿ. ಹಿಂದೂ ಧರ್ಮವು ರಾಜಾ ಪ್ರತ್ಯಕ್ಷ ದೇವತಃ ಎಂದು ಬೋಧಿಸುತ್ತದೆ. ನ್ಯಾಯಾಧೀಶ ಪ್ರತ್ಯಕ್ಷ ದೇವತಾಃ ಎಂದು ಹೇಳುತ್ತದೆ. ಅವರು ಹಿಂದೂ ಧರ್ಮದ ಭಾಗವಲ್ಲವೇ? ನೀವು ನ್ಯಾಯಾಲಯ ಮತ್ತು ನ್ಯಾಯಮೂರ್ತಿಗಳನ್ನು ಹೀಗಳೆದರೆ ಸಂಸ್ಥೆ ಹೇಗೆ ಕಾರ್ಯನಿರ್ವಹಿಸಬೇಕು? ಮೊದಲಿಗೆ ಹೀಗಳೆಯುತ್ತೀರಿ. ಆಮೇಲೆ ಬಂದು ಕ್ಷಮೆ ಕೋರುತ್ತೀರಿ. ಸಾಕಷ್ಟು ಜನರು ನಿಮ್ಮನ್ನು ಅನುಸರಿಸುತ್ತಾರೆ. ನೀವೇ ಹೀಗೆ ಮಾಡಿದರೆ ನಿಮ್ಮನ್ನು ಅನುಸರಿಸುವವರಿಗೆ ಏನು ಸಲಹೆ ಕೊಡುತ್ತೀರಿ?” ಎಂದು ಪ್ರಶ್ನಿಸಿದರು.

 “ಸ್ವಾಮೀಜಿ ಅಥವಾ ಯಾರೇ ಆದರೂ ನ್ಯಾಯಾಲಯಗಳಿಗೆ ನ್ಯಾಯಾಂಗ ನಿಂದಕರು ಒಂದು ವರ್ಗ. ಹಿಂದೂ ಧರ್ಮದಲ್ಲಿ ನ್ಯಾಯಸ್ಥಾನಕ್ಕೆ ಗೌರವ ಕೊಡಬೇಕು ಎಂದು ಹೇಳಲಾಗಿದೆ. ಅದಾಗ್ಯೂ, ನೀವೇಕೆ ಗೌರವ ಕೊಡಲಿಲ್ಲ. ಮಂತ್ರ, ಶ್ಲೋಕಗಳಲ್ಲಿ ನ್ಯಾಯಾಧೀಶಃ ಪ್ರತ್ಯಕ್ಷ ದೇವತಃ ಎಂದು ಹೇಳಲಾಗಿದೆ. ನೀವೆ ಹೀಗೆ ಹೇಳಿದರೆ ಈ ಸಂಸ್ಥೆಯನ್ನು ನಾವು ಉಳಿಸುವುದು ಹೇಗೆ? ನಿಮ್ಮ ಭಕ್ತರು ಏನು ಮಾಡಬಹುದು? ಸಾವಿರ ನ್ಯಾಯಾಂಗ ನಿಂದನೆ ಪ್ರಕರಣ ನಮ್ಮ ಮುಂದೆ ಬರುತ್ತವೆ. ನ್ಯಾಯದಾನ ಮಾಡುವುದು ಹೇಗೆ? ದಿನ ನ್ಯಾಯಾಂಗ ನಿಂದನೆ ಪ್ರಕರಣ ನಡೆಸುತ್ತಾ ಕುಳಿತರೆ ನ್ಯಾಯದಾನ ಮಾಡುವುದು ಹೇಗೆ? ನಿಮ್ಮಂಥ ಶ್ರೇಷ್ಠ ಸ್ಥಾನದಲ್ಲಿರುವ ಸ್ವಾಮೀಜಿಯಂಥವರಿಗೆ ಜವಾಬ್ದಾರಿ ಬೇಕು. ನ್ಯಾಯಾಧೀಶರು, ನ್ಯಾಯಾಲಯದ ಬಗ್ಗೆ ಗೌರವ ಬರುವ ರೀತಿಯಲ್ಲಿ ನಡೆದುಕೊಳ್ಳಬೇಕು. ಆಗ ನಿಮಗೂ ಗೌರವ ಬರುತ್ತದೆ. ಇಲ್ಲವಾದಲ್ಲಿ ನಮ್ಮ ಕೆಲಸ ಮಾಡಬೇಕಾಗುತ್ತದೆ” ಎಂದು ಎಚ್ಚರಿಸಿದರು.

ಆಗ ಮಧ್ಯಪ್ರವೇಶಿಸಿದ ಸಿಜೆ ಅವರು “ಅಸಾಮಾನ್ಯ ಜವಾಬ್ದಾರಿಗಳು ಅಸಾಮಾನ್ಯ ಶಕ್ತಿಯೊಂದಿಗೆ ಬರುತ್ತವೆ ಎಂದು ಹೇಳುತ್ತಾರೆ. ನಾಯಕ ಏನು ಹೇಳುತ್ತಾರೋ, ಭಕ್ತರು ಅದನ್ನೇ ಮಾಡುತ್ತಾರೆ. ನಾವು ಸಂಸ್ಥೆಯ ಭಾಗ. ಈ ಕೆಲಸ ಮಾಡಲು ನಮ್ಮನ್ನು ಆಯ್ಕೆ ಮಾಡಲಾಗಿದೆ. ಗೌರವವನ್ನು ಸಂಸ್ಥೆಗೆ ನೀಡಲಾಗುತ್ತದೆಯೇ ವಿನಾ ವ್ಯಕ್ತಿಗಲ್ಲ. ನಾವು ಸಂಸ್ಥೆಯ ಬಗ್ಗೆ ಕಾಳಜಿ ಹೊಂದಿದ್ದೇವೆ. ಜನರು ಬಂದು ಹೋಗುತ್ತಾರೆ. ಸಂಸ್ಥೆಯು ಶತಮಾನಗಳು ಕಳೆದರೂ ಇರುತ್ತವೆ. ಹಿಂದೆಯೂ ಸಂಸ್ಥೆ ಇತ್ತು. ಹೀಗಾಗಿ, ಸಂಸ್ಥೆ ಗೌರವಿಸಬೇಕು” ಎಂದರು.

ಅಂತಿಮವಾಗಿ ಸ್ವಾಮೀಜಿ ಅವರ ಕ್ಷಮೆ ಕೋರಿದ ಹಿನ್ನೆಲೆಯನ್ನು ಅರ್ಜಿಯನ್ನು ನ್ಯಾಯಾಲಯ ಇತ್ಯರ್ಥಪಡಿಸಿದೆ.

ಹಿಂದಿನ ಲೇಖನ20 ವರ್ಷಗಳಿಂದ ನಾನೂ ಅವಮಾನ ಎದುರಿಸುತ್ತಿದ್ದೇನೆ: ಉಪರಾಷ್ಟ್ರಪತಿ ಜಗದೀಪ್ ಧನಕರ್  ಸಂತೈಸಿದ ಪ್ರಧಾನಿ ಮೋದಿ
ಮುಂದಿನ ಲೇಖನವಾಹನ ಅಡ್ಟಗಟ್ಟಿ ದರೋಡೆ: 6 ಮಂದಿ ಆರೋಪಿಗಳ ಬಂಧನ