ದಾವಣಗೆರೆ: ವಕ್ಫ್ ಆಸ್ತಿ ವಿಚಾರವಾಗಿ ಪ್ರತ್ಯೇಕವಾಗಿ ಪಾದಯಾತ್ರೆ ಹೊರಟಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಕೂಡಲೇ ಪಕ್ಷದ ರಾಷ್ಟ್ರೀಯ ವರಿಷ್ಠರು ತಡೆಯಬೇಕು. ಇಲ್ಲದಿದ್ದರೆ ಅನಿವಾರ್ಯವಾಗಿ ನಾವೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೆ ಚರ್ಚಿಸಿ ಪ್ರತ್ಯೇಕ ಪಾದಯಾತ್ರೆ ನಡೆಸಬೇಕಾಗುತ್ತದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.
ಶನಿವಾರ (ನ16)ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೇಣುಕಾಚಾರ್ಯ ‘ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ರಾಜಕೀಯ ಏಳಿಗೆ ಸಹಿಸದ ಕೆಲವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪ್ರತ್ಯೇಕ ಪಾದಯಾತ್ರೆಯ ಹಗಲುವೇಷದ ನಾಟಕ ಮಾಡುತ್ತಿದ್ದು ಇದರಲ್ಲಿ ಅವರ ಸ್ವಹಿತಾಸಕ್ತಿಯೇ ಮುಖ್ಯವಾದಂತೆ ಕಾಣುತ್ತಿದೆ. ರಾಜ್ಯಾಧ್ಯಕ್ಷರನ್ನು ಹೊರಗಿಟ್ಟು ನಾನೇ ಮಹಾನಾಯಕ ಎಂದು ಬಿಂಬಿಸಿಕೊಂಡು ಯಾರ ಅನುಮತಿ ಪಡೆಯದೇ ನಡೆಸುವ ಅಭಿಯಾನಕ್ಕೆ ಕಾರ್ಯಕರ್ತರು ಕೈ ಜೋಡಿಸುವುದಿಲ್ಲ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಯಲಿದ್ದು ಯಾವುದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ರಾಜೀನಾಮೆ ನೀಡಬೇಕಾಗಬಹುದು. ವಕ್ಫ್ ಆಸ್ತಿ ವಿಚಾರದ ಬಗ್ಗೆ ಹೋರಾಡಲು ರಾಜ್ಯದಲ್ಲಿ ರಾಜ್ಯಾಧ್ಯಕ್ಷರು, ವಿಧಾನಸಭೆ ಹಾಗೂ ವಿಧಾನಪರಿಷತ್ ಪ್ರತಿಪಕ್ಷದ ನಾಯಕರ ನೇತೃತ್ವದಲ್ಲಿ ಮೂರು ತಂಡ ಮಾಡಲಾಗಿದ್ದು ಈ ಮೂರು ನಾಯಕರ ತಂಡ ಬಿಟ್ಟು ಬೇರೆ ಪರ್ಯಾಯ ತಂಡಕ್ಕೆ ಅವಕಾಶವಿಲ್ಲ ಎಂದರು.
ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಈಗಾಗಲೇ ವಾಲ್ಮೀಕಿ ನಿಗಮ, ಮುಡಾ ಹಗರಣಗಳ ವಿರುದ್ಧ ಯಶಸ್ವಿ ಹೋರಾಟ ನಡೆದಿದ್ದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗಿದೆ. ಬೆಂಗಳೂರಿನಿಂದ- ಮೈಸೂರು ವರೆಗೆ ಪಕ್ಷ ನಡೆಸಿದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳದೇ ಸರ್ಕಾರದ ಜತೆಕೈಜೋಡಿಸಿದವರೇ ಇಂದು ಜನಜಾಗೃತಿ ಅಭಿಯಾನ ನಡೆಸಲು ಹೊರಟಿರುವುದರ ಉದ್ದೇಶವಾದರೂ ಏನು ಎಂಬುದನ್ನು ಯತ್ನಾಳ್ ಸ್ಪಷ್ಟಪಡಿಸಬೇಕು ಎಂದು ರೇಣುಕಾಚಾರ್ಯ ಸವಾಲು ಹಾಕಿದರು.
ರಾಜ್ಯದ ಆಡಳಿತ ವ್ಯವಸ್ಥೆ ನೋಡಿದರೆ ರಾಜ್ಯದಲ್ಲಿ ನಿಜವಾಗಿಯೂ ಕಾನೂನುಬದ್ಧ ಸರ್ಕಾರ ಇದೆಯೋ ತಾಲಿಬಾಲ್ ಸರ್ಕಾರ ಇದೆಯೋ ಎಂಬ ಸಂಶಯ ಮೂಡಿಸುತ್ತಿದೆ. ವಕ್ಫ್ ಬೋರ್ಡ್ ಮೂಲಕ ರೈತರಿಗೆ ಯಾವುದೇ ನೋಟಿಸ್ ಕೊಡುವುದಿಲ್ಲ. ಕೊಟ್ಟಂಥ ನೋಟಿಸ್ ವಾಪಸ್ ಪಡೆಯುವುದಾಗಿ ಒಂದು ಕಡೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರೆ, ಇನ್ನೊಂದೆಡೆ ಚಿಕ್ಕಬಳ್ಳಾಪುರ ಜಿಲ್ಲೆಯ ತಿಮ್ಮಸಂದ್ರದಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವ ಜಮೀನಿನಲ್ಲಿ ಉಳುಮೆ ಮಾಡಲು ಮುಂದಾಗಿದ್ದ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ, ಟ್ರ್ಯಾಕ್ಟರ್ ವಶಪಡಿಸಿಕೊಂಡಿರುವುದು ಖಂಡನೀಯ ಎಂದರು.
ಕೂಡಲೇ ಲಾಠಿ ಪ್ರಹಾರ ನಡೆಸಿದ ಪೊಲೀಸರನ್ನು ಅಮಾನತು ಮಾಡಿ, ವಶಪಡಿಸಿಕೊಂಡ ಟ್ಯ್ರಾಕ್ಟರ್ ನ್ನು ರೈತರಿಗೆ ಮರಳಿಸಬೇಕು. ಕೂಡಲೇ ಪಹಣಿ ಕಾಲಂ 11ರಲ್ಲಿ ನಮೂಪಡಿಸಬೇಕು ವಕ್ಫ್ ಹೆಸರನ್ನು ರದ್ದು ಪಡಿಸಬೇಕು ಎಂದರು.
ಜಮೀರ್ ಅವರನ್ನು ಕಾಂಗ್ರೆಸ್ ಹದ್ದುಬಸ್ತಿನಲ್ಲಿ ಇಡದಿದ್ದರೆ ನಾವೇ ಅವರಿಗೆ ತಕ್ಕಪಾಠ ಕಲಿಸಬೇಕಾಗುತ್ತದೆ. ಕಾಂಗ್ರೆಸ್ನ 50 ಶಾಸಕರಿಗೆ 50 ಕೋಟಿ ರೂ. ಆಫರ್ ನೀಡಿದ್ದಾರೆಂಬ ಮುಖ್ಯಮಂತ್ರಿಯವರ ಹೇಳಿಕೆ ಸುಳ್ಳು. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನ ಮಾಡುತ್ತಿಲ್ಲ. ಬದಲಾಗಿ ಸಿದ್ದರಾಮಯ್ಯ ಅವರನ್ನು ಕೆಳಗಿಸಲು ಅವರ ಪಕ್ಷದೊಳಗಿನವರೇ ಸಂಚು ನಡೆಸಿದ್ದು ಅವರಿಂದಲೇ ಸರ್ಕಾರ ಬೀಳಬಹುದು ಎಂದರು.