ಹೊಸದಿಲ್ಲಿ: ಕೇಂದ್ರ ಪ್ರಕಟಿಸಿರುವ ರ‍್ಯಾಂಕಿಂಗ್ ಪಟ್ಟಿಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ದೇಶದ ಅತ್ಯುತ್ತಮ ಯೂನಿವರ್ಸಿಟಿ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.
ಇಂದು ಕೇಂದ್ರ ಶಿಕ್ಷಣ ಸಚಿವಾಲಯ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು 2024 ಅನ್ನು ಪ್ರಕಟಿಸಿದ್ದು, ಇದರಲ್ಲಿನ ವಿವಿಧ ವಿಭಾಗಗಳಲ್ಲಿ ಬೆಂಗಳೂರಿನ ಹಲವು ಸಂಸ್ಥೆಗಳು ಸ್ಥಾನ ಪಡೆದಿವೆ.
ರ‍್ಯಾಂಕಿಂಗ್ ಗಳ ಒಂಬತ್ತನೇ ಆವೃತ್ತಿಯನ್ನು ಪ್ರಕಟಿಸಲಾಗಿದ್ದು, ಇದನ್ನು ಅಧಿಕೃತ NIRF ವೆಬ್ ಸೈಟ್ nirfindia.orgನಲ್ಲಿ ನೋಡಬಹುದು. NIRF ಶ್ರೇಯಾಂಕವು ವಿಶ್ವವಿದ್ಯಾಲಯಗಳು, ಕಾಲೇಜುಗಳು, ಸಂಶೋಧನಾ ಸಂಸ್ಥೆಗಳು ಮತ್ತು ಎಂಜಿನಿಯರಿಂಗ್, ನಿರ್ವಹಣೆ ಮತ್ತು ವೈದ್ಯಕೀಯ ಶಿಕ್ಷಣದಂತಹ ವಿವಿಧ ವಿಶೇಷ ಕ್ಷೇತ್ರಗಳನ್ನು ಒಳಗೊಂಡಂತೆ 13 ವಿಭಾಗಗಳನ್ನು ಒಳಗೊಂಡಿದೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಬೆಂಗಳೂರು) ದೇಶದ ಅತ್ಯುತ್ತಮ ವಿಶ್ವವಿದ್ಯಾನಿಲಯ ಎಂದು ಶ್ರೇಯಾಂಕ ಪಡೆದಿದೆ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ದೆಹಲಿ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ನಂತರದ ಸ್ಥಾನಗಳಲ್ಲಿವೆ. ದೇಶದ ಟಾಪ್ ಐದು ರಿಸರ್ಚ್ ಇನ್‌ಸ್ಟಿಟ್ಯೂಟ್‌ಗಳಲ್ಲಿ ಐಐಎಸ್‌ಸಿ ಅಗ್ರಸ್ಥಾನದಲ್ಲಿದೆ. ಟಾಪ್ ಟೆನ್ ಸಂಸ್ಥೆಗಳ ಪಟ್ಟಿಯಲ್ಲಿಯೂ ಐಐಟಿ ಮದ್ರಾಸ್ ನಂತರ ಐಐಎಸ್‌ಸಿ ಬೆಂಗಳೂರು 2ನೇ ಸ್ಥಾನದಲ್ಲಿದೆ. ನಾವೀನ್ಯತೆಯ ವಿಭಾಗದಲ್ಲಿಯೂ ಐಐಎಸ್‌ಸಿ 4ನೇ ಸ್ಥಾನದಲ್ಲಿದೆ.
ಮ್ಯಾನೇಜ್ ಮೆಂಟ್ ರ‍್ಯಾಂಕಿಂಗ್ ನಲ್ಲಿ ಐಐಎಂ ಬೆಂಗಳೂರು 2ನೇ ಸ್ಥಾನದಲ್ಲಿದೆ. ದೇಶದ ಟಾಪ್ 5 ಮೆಡಿಕಲ್ ಕಾಲೇಜುಗಳಲ್ಲಿ ಬೆಂಗಳೂರಿನ ನಿಮ್ಹಾನ್ಸ್ 4ನೇ ಸ್ಥಾನದಲ್ಲಿದೆ. ಟಾಪ್ ಕಾನೂನು ಕಾಲೇಜುಗಳಲ್ಲಿ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಮೊದಲ ಸ್ಥಾನದಲ್ಲಿದೆ.