ಅಕ್ರಮ ಬೆಟ್ಟಿಂಗ್ ಆ್ಯಪ್‌ಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಮಾಜಿ ಕ್ರಿಕೆಟಿಗ ಶಿಖರ್ ಧವನ್‌ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದೆ.
ಅಧಿಕಾರಿಗಳ ಪ್ರಕಾರ, ಪ್ರಕರಣದ ತನಿಖೆಯು ʻ1xBetʼ ಬೆಟ್ಟಿಂಗ್ ಆ್ಯಪ್‌ಗೆ ಸಂಬಂಧಿಸಿದೆ. ಶಿಖರ್ ಧವನ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳ ಮೂಲಕ ಬೆಟ್ಟಿಂಗ್ ಆ್ಯಪ್ ಪರ ಪ್ರಚಾರ ಮಾಡ್ತಿದ್ದಾರೆ. ಹೀಗಾಗಿ ʻ1xBetʼ ಆ್ಯಪ್ ಜಾಹೀರಾತಿಗೆ ಸಂಬಂಧಿಸಿದಂತೆ 39 ವರ್ಷದ ಧವನ್ ತಮ್ಮ ಪಾತ್ರ ಸ್ಪಷ್ಟಪಡಿಸಬೇಕಿದೆ. ಅದಕ್ಕಾಗಿ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ಜಾರಿ ಮಾಡಿದೆ.
ಈ ತನಿಖೆಯ ಭಾಗವಾಗಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (PMLA) ಅಡಿಯಲ್ಲಿ ಹೇಳಿಕೆ ದಾಖಲಿಸಲಾಗುವುದು ಎಂದು ಇಡಿ ತಿಳಿಸಿದೆ. ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚನೆ ಜೊತೆಗೆ ಭಾರೀ ಪ್ರಮಾಣದ ತೆರಿಗೆ ವಂಚನೆ ಮಾಡಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಬೆಟ್ಟಿಂಗ್ ಆ್ಯಪ್‌ಗಳಿಗೆ ಸಂಬಂಧಿಸಿದ ಹಲವಾರು ಪ್ರಕರಣಗಳ ತನಿಖೆ ನಡೆಸುತ್ತಿದೆ. ಈಗಾಗಲೇ ಬೆಟ್ಟಿಂಗ್ ಆ್ಯಪ್‌ಗಳ ಪ್ರಚಾರದಲ್ಲಿದ್ದ ಹಲವಾರು ಬಾಲಿವುಡ್ ಮತ್ತು ದಕ್ಷಿಣ ಭಾರತದ ಚಲನಚಿತ್ರ ತಾರೆಯರು, ಕ್ರಿಕೆಟಿಗರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ.















