ಬೆಂಗಳೂರು: ದೀಪಾವಳಿ ಪ್ರಯುಕ್ತ ತಮ್ಮ ನಿವಾಸ ದೀಪಾಲಂಕಾರಕ್ಕೆ ಬೀದಿದೀಪದ ಕಂಬದಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಪ್ರಕರಣ ಸಂಬಂಧ ಬೆಸ್ಕಾಂ ವಿಧಿಸಿದ 68,526 ರೂ. ದಂಡದ ಮೊತ್ತವನ್ನು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಪಾವತಿಸಿದ್ದಾರೆ.
ದಂಡದ ಮೊತ್ತವನ್ನು ಕುಮಾರಸ್ವಾಮಿ ಅವರು ಆನ್ ಲೈನ್ ಮೂಲಕ ಪಾವತಿಸಿದ್ದಾರೆ.
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ, ಬೆಸ್ಕಾಂ 2.5 ಕಿಲೋ ವ್ಯಾಟ್ಗೆ ಲೆಕ್ಕ ತೆಗೆದುಕೊಂಡಿದೆ. 7 ದಿನಕ್ಕೆ 71 ಯೂನಿಟ್ ಆಗಲಿದೆ ಅಂತ ಕೊಟ್ಟಿದ್ದಾರೆ. ಬೆಸ್ಕಾಂ ಪ್ರಕಾರ, 2,526 ರೂ. ಬಿಲ್ ಬರಬೇಕಿತ್ತು. ಆದರೆ, 68,526 ರೂ. ಕರೆಂಟ್ ಬಿಲ್ ನೀಡಿದೆ. ಹೀಗಾಗಿ ಕರೆಂಟ್ ಬಿಲ್ ಬಗ್ಗೆ ಪುನರ್ ಪರಿಶೀಲನೆ ಮಾಡಲು ಹೇಳಿದ್ದಾಗಿ ತಿಳಿಸಿದರು.
ಹೆಚ್ ಡಿ ಕುಮಾರಸ್ವಾಮಿ ಅವರ ನಿವಾಸಕ್ಕೆ ದೀಪಾವಳಿ ದೀಪಾಲಂಕಾರಕ್ಕಾಗಿ ಅನಧಿಕೃತವಾಗಿ ಬೀದಿ ದೀಪದ ಕಂಬದಿಂದ ನೇರವಾಗಿ ವಿದ್ಯುತ್ ಪಡೆದಿರುವ ಆರೋಪವನ್ನು ಕಾಂಗ್ರೆಸ್ ಮಾಡಿತ್ತು. ಇದರ ಬೆನ್ನಲ್ಲೇ, ಜಯನಗರದ ಬೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಕುಮಾರಸ್ವಾಮಿ ಮನೆಗೆ ತೆರಳಿ ಪರಿಶೀಲನೆ ಮಾಡಿ ಎಫ್ ಐಆರ್ ದಾಖಲಿಸಿದ್ದರು. ಬಳಿಕ ದಂಡ ವಿಧಿಸಿದ್ದರು.
ಬೆಸ್ಕಾಂ ಜಾಗೃತಾ ದಳದ ಡಿವೈಎಸ್ಪಿ ಅನುಷ ನೇತೃತ್ವದಲ್ಲಿ ವಿದ್ಯುತ್ ಬಳಕೆ ಕೌಂಟಿಂಗ್ ಮಾಡಿ, 10 ನಿಮಿಷಕ್ಕೆ ಎಷ್ಟು ವಿದ್ಯುತ್ ಬಳಕೆ ಆಗುತ್ತದೆ ಎನ್ನುವುದನ್ನು ಲೆಕ್ಕ ಮಾಡಿದ್ದರು. ಇದರಿಂದ ಎರಡು ದಿನ ಎಷ್ಟು ಬಳಕೆ ಆಗಿದೆ ಎಂಬುದರ ಲೆಕ್ಕ ತೆಗೆದು, ಅಧಿಕಾರಿಗಳು ವರದಿ ನೀಡಿದ್ದರು. ಇದರ ಅನ್ವಯ ಬೆಸ್ಕಾಂ ಇಲಾಖೆ ಬರೊಬ್ಬರಿ 68 ಸಾವಿರ ದಂಡವನ್ನು ವಿಧಿಸಿ ಏಳು ದಿನಗಳೊಳಗಾಗಿ ಕಟ್ಟುವಂತೆ ಸೂಚಿಸಿತ್ತು.