ಬೆಂಗಳೂರು: ಬೇಲೇಕೇರಿ ಬಂದರಿನಲ್ಲಿ ಅರಣ್ಯ ಇಲಾಖೆ ಸಂಗ್ರಹಿಸಿಟ್ಟಿದ್ದ ಕಬ್ಬಿಣದ ಅದಿರು ಕಳವು ಮತ್ತು ಅಕ್ರಮವಾಗಿ ವಿದೇಶಗಳಿಗೆ ರಫ್ತು ಮಾಡಿದ ಪ್ರಕರಣದಲ್ಲಿ ಶಿಕ್ಷೆ ವಿಧಿಸಿರುವ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಖಾರದಪುಡಿ ಮಹೇಶ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಪಡಿಸುವಂತೆ ಕೋರಿ ಮೆಸರ್ಸ್ ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್ ಪಾಲುದಾರ ಖಾರದಪುಡಿ ಮಹೇಶ್ ಸಲ್ಲಿಸಿದ್ದ ಅರ್ಜಿ ನ್ಯಾಯಮೂರ್ತಿ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ಅಲ್ಲದೇ, ಅರ್ಜಿಗೆ ಸಂಬಂಧಿಸಿದಂತೆ ಕಚೇರಿ ಆಕ್ಷೇಪಣೆಗಳನ್ನು ಸರಿಪಡಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಪ್ರಕರಣದಲ್ಲಿ ಮಹೇಶ್ ಜೆ. ಬಿಳಿಯೆ, ಮೆಸರ್ಸ್ ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್, ಅದರ ಪಾಲುದಾರ ಕೆ ಮಹೇಶ್ ಕುಮಾರ್ ಅಲಿಯಾಸ್ ಖಾರಪುಡಿ ಮಹೇಶ್, ಮೆಸರ್ಸ್ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಸೈಲ್‌ಗೆ ವಿಚಾರಣಾ ನ್ಯಾಯಾಲಯ ಏಳು ವರ್ಷಗಳ ಕಾಲ ಶಿಕ್ಷೆ ಮತ್ತು 9.65 ಕೋಟಿ ರೂ.ಗಳ ದಂಡ ವಿಧಿಸಿ ಆದೇಶಿಸಿತ್ತು. ಈ ಆದೇಶ ರದ್ದುಪಡಿಸಿ ಪ್ರಕರಣದಲ್ಲಿ ಖುಲಾಸೆಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಪ್ರಕರಣದ ಹಿನ್ನೆಲೆ: ಋತುಮಾನ (ಸೀಸನಲ್) ಬಂದರು ಎಂದು ಕರೆಯಲ್ಪಡುವ ಬೇಲಿಕೇರಿ ಬಂದರಿನಿಂದ 2009-2010ರ ಅವಧಿಯಲ್ಲಿ 88 ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ರಫ್ತು ಮಾಡಲಾಗಿತ್ತು. ಈ ಸಂಬಂಧ ಗಣಿ ಮತ್ತು ಭೂವಿಜ್ಞಾನ ಇಲಾಖೆಯು 38 ಲಕ್ಷ ಟನ್ ಕಬ್ಬಿಣದ ಅದಿರು ಮಾತ್ರ ರಫ್ತು ಮಾಡಲು ಅನುಮತಿಸಿತ್ತು.
ಆದರೆ, 50 ಲಕ್ಷ ಟನ್ ಕಬ್ಬಿಣದ ಅದಿರನ್ನು ಸೂಕ್ತ ಅನುಮತಿ ಇಲ್ಲದೇ ರಫ್ತು ಮಾಡಲಾಗಿದೆ ಎಂಬುದು ದತ್ತಾಂಶದಿಂದ ಬೆಳಕಿಗೆ ಬಂದಿತ್ತು. ಈ ವಿಚಾರವನ್ನು ಸರ್ಕಾರೇತರ ಸಂಸ್ಥೆಯಾದ ಸಮಾಜ ಪರಿವರ್ತನಾ ಸಂಸ್ಥೆಯು ಸುಪ್ರೀಂ ಕೋರ್ಟ್ ಗಮನಕ್ಕೆ ತಂದಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರೀಯ ಉನ್ನತಾಧಿಕಾರ ಸಮಿತಿಯನ್ನು (ಸಿಇಸಿ) ರಚಿಸಿದ್ದ ಸುಪ್ರೀಂ ಕೋರ್ಟ್, ಶಿಫಾರಸುಗಳನ್ನು ಸಲ್ಲಿಸಲು ಆದೇಶಿಸಿತ್ತು.
ಇದರ ಭಾಗವಾಗಿ ಗಣಿ ಪ್ರದೇಶ ಮತ್ತು ಬಂದರು ಜಾಗದಲ್ಲಿ ವಾಸ್ತವಿಕ ಪರಿಶೀಲನೆ ನಡೆಸಿದ್ದ ಸಿಇಸಿಯು 27.04.2012ರಂದು ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿತ್ತು. ಇದನ್ನು ಪರಿಗಣಿಸಿದ್ದ ಸುಪ್ರೀಂಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಅಲ್ಲದೇ, ಸಿಬಿಐ ತನಿಖೆ ಪ್ರಶ್ನಿಸಿ ಸಲ್ಲಿಸುವ ಅರ್ಜಿಯನ್ನು ಯಾವುದೇ ನ್ಯಾಯಾಲಯ ಪುರಸ್ಕರಿಸಬಾರದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಿತ್ತು.
ಅಲ್ಲದೇ, ಅರಣ್ಯ ಇಲಾಖೆಯು ಮೆಸರ್ಸ್ ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್‌ನಿಂದ (ಎಸ್‌ಎಲ್‌ವಿಎಂ) ಜಪ್ತಿ ಮಾಡಿದ್ದ 18,200 ಮೆಟ್ರಿಕ್ ಟನ್ ಮತ್ತು 21,500 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಮೆಸರ್ಸ್ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ (ಎಸ್‌ಎಂಎಸ್‌ಪಿಎಲ್), ಉಪ ಬಂದರು ಸಂರಕ್ಷಕ ಮಹೇಶ್ ಬಿಳಿಯೆ ಮತ್ತು ಎಸ್‌ಎಲ್‌ವಿಎಂಯು ಕ್ರಿಮಿನಲ್ ಪಿತೂರಿ ನಡೆಸಿ ಚೀನಾಕ್ಕೆ ರಫ್ತು ಮಾಡಲಾಗಿತ್ತು ಎಂದು ಆರೋಪಿಸಲಾಗಿತ್ತು.