ಮನೆ ಕಾನೂನು ನಿಯಮ ಬಾಹಿರವಾಗಿ ಮನೆ ತೆರವು: ₹15 ಲಕ್ಷ ಪರಿಹಾರ ನೀಡಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ

ನಿಯಮ ಬಾಹಿರವಾಗಿ ಮನೆ ತೆರವು: ₹15 ಲಕ್ಷ ಪರಿಹಾರ ನೀಡಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ

0

ಬೆಂಗಳೂರು: ಮಹಿಳೆಯೊಬ್ಬರ ಮನೆಯನ್ನು ಅಕ್ರಮವಾಗಿ ತೆರವುಗಿಳಿಸಿದ್ದ ಬಿಬಿಎಂಪಿ ಚಾಟಿ ಬೀಸಿರುವ ಹೈಕೋರ್ಟ್ ಸಂಕಷ್ಟ ಎದುರಿಸಿದ ಮಹಿಳೆಗೆ 15 ಲಕ್ಷ ರೂ. ಪರಿಹಾರ ಪಾವತಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಆದೇಶಿಸಿದೆ.

ನಗರದ ಕೆ.ಆರ್ ಪುರಂ ಹೋಬಳಿಯ ದೊಡ್ಡನೆಕ್ಕುಂದಿಯ ನಾರಾಯಣರೆಡ್ಡಿ ಬಡಾವಣೆಯ ನಿವಾಸಿ ಕವಿತಾ ಪೊಡ್ವಾಲ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸೂರಜ್ ಗೋವಿಂದರಾಜು ಅವರಿದ್ದ ಪೀಠ ಈ ಮಹತ್ವದ ಆದೇಶ ನೀಡಿದೆ.

ಪೀಠ ತನ್ನ 70 ಪುಟಗಳ ತೀರ್ಪಿನಲ್ಲಿ ಅರ್ಜಿದಾರರಿಗೆ ನೋಟಿಸ್ ನೀಡದೇ ಮನೆ ತೆರವುಗೊಳಿಸಿರುವುದು ಅಕ್ರಮ ಹಾಗೂ ಕಾನೂನು ಬಾಹಿರ. ಅರ್ಜಿದಾರರ ಮನೆಯಲ್ಲಿನ ವಸ್ತುಗಳಿಗೆ ಹಾನಿ ಆಗಿರುವುದರಿಂದ ಪಾಲಿಕೆ 10 ಲಕ್ಷ ರೂ.ಪರಿಹಾರ ನೀಡಬೇಕು. ಬಿಬಿಎಂಪಿ ಮುಖ್ಯ ಆಯುಕ್ತರು ಆ 10 ಲಕ್ಷ ರೂ.ಗಳನ್ನು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಅವರಿಂದ ವಸೂಲು ಮಾಡಿಕೊಳ್ಳಬೇಕು. ಅಲ್ಲದೇ ಪಾಲಿಕೆಯ ಕಾನೂನು ಬಾಹಿರ ಕೃತ್ಯದಿಂದ ಅರ್ಜಿದಾರರಿಗೆ ಆಗಿರುವ ಮಾನಸಿಕ ಆಘಾತಕ್ಕೆ 5 ಲಕ್ಷ ರೂ ಪರಿಹಾರ ಪಾವತಿಸಬೇಕು ಎಂದು ಆದೇಶಿಸಿದೆ.

ಅಲ್ಲದೇ ಮನೆ ತೆರವು ಮಾಡಿರುವುದಕ್ಕೆ ಕಾರಣವನ್ನು ಪತ್ತೆ ಹಚ್ಚಿ 45 ದಿನಗಳಲ್ಲಿ ವರದಿಯನ್ನು ಸಲ್ಲಿಸಬೇಕು. ಅರ್ಜಿದಾರರು ಮೊದಲು ಮನೆ ಇದ್ದ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುವವರಿಗೆ 2016ರ ಏಪ್ರಿಲ್ 25 ರಿಂದ ಅನ್ವಯವಾಗುವಂತೆ ಪ್ರತಿ ತಿಂಗಳಿಗೆ 10 ಸಾವಿರ ರೂ ನಂತೆ ಪರಿಹಾರ ಪಾವತಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.

ದಾಖಲೆಗಳನ್ನು ಪರಿಶೀಲಿಸಿದಾಗಿ ಬಿಬಿಎಂಪಿ ಅಧಿಕಾರಿಗಳು ಕೆಎಂಸಿ ಕಾಯ್ದೆ ಅನ್ವಯ ಻ರ್ಜಿದಾರರಿಗೆ ನೋಟಿಸ್ ತಲುಪಿಸಿಲ್ಲ. ಹಾಗಾಗಿ ಅಧಿಕಾರಿಗಳ ಮನೆ ತೆರವು ಕಾನೂನುಬಾಹಿರ ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಅಷ್ಟೇ ಅಲ್ಲದೇ ಕೋರ್ಟ್ ಇಂತಹ ಪ್ರಕರಣಗಳಲ್ಲಿ ಪಾಲಿಕೆ ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಹಲವು ನಿರ್ದೇಶನ ನೀಡಿದೆ.

ಸಾಮಾನ್ಯ ನಿರ್ದೇಶನಗಳು

ಅದರಂತೆ ”ಯಾವುದೇ ಅಕ್ರಮ ಕಟ್ಟಡಗಳ ಬಗ್ಗೆ ದೂರು ಬಂದಾಗ ಬಿಬಿಎಂಪಿ ಅಧಿಕಾರಿಗಳು ಏಕಾಏಕಿ ನೋಟಿಸ್‌ ನೀಡಬಾರದು. ನೋಟಿಸ್‌ ನೀಡುವ ಮುನ್ನ ಸ್ಥಳ ಪರಿಶೀಲನೆ ನಡೆಸಬೇಕು.

ನಕ್ಷೆ ಮಂಜೂರಾಗಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ಮಂಜೂರಾದ ನಕ್ಷೆಯಲ್ಲಿ ಯಾವುದಾದರೂ ಉಲ್ಲಂಘನೆಗಳು ಆಗಿವೆಯೇ ಎಂಬುದನ್ನು ಪರಿಶೀಲಿಸಬೇಕು.

ಸೆಟ್‌ ಬ್ಯಾಕ್‌(ಅಕ್ಕ ಪಕ್ಕ ಜಾಗ ಬಿಡುವುದು), ಕಟ್ಟಡದ ವಿಸ್ತೀರ್ಣ, ಎತ್ತರ, ಎಫ್‌ಎಆರ್‌ ಮತ್ತಿತರ ಉಪ ನಿಯಮ(ಬೈಲಾ) ಪಾಲಿಸಲಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.

ಉಲ್ಲಂಘನೆ ವಿವರಗಳ ಪಟ್ಟಿ ಮಾಡಬೇಕು. ಆನಂತರವೇ ನಿರ್ದಿಷ್ಟ ಉಲ್ಲಂಘನೆಗಳು ಕಂಡು ಬಂದರೆ ಮಾತ್ರ ನೋಟಿಸ್‌ ನೀಡಿ ಕಾನೂನು ಪ್ರಕಾರ ಮುಂದಿನ ಕ್ರಮಗಳನ್ನು ಜರುಗಿಸತಕ್ಕದ್ದು” ಎಂದು ನ್ಯಾಯಪೀಠ ಆದೇಶದಲ್ಲಿಸ್ಪಷ್ಟ ಸೂಚನೆಯನ್ನು ಬಿಬಿಎಂಪಿಗೆ ನೀಡಿದೆ.

ಪ್ರಕರಣದ ಹಿನ್ನೆಲೆ

ಅರ್ಜಿದಾರರು ಬೆಂಗಳೂರು ನಗರದ ಪೂರ್ವ ತಾಲೂಕಿನ ಕೆ ಆರ್‌ ಪುರ ಹೋಬಳಿಯ ದೊಡ್ಡನೆಕ್ಕುಂದಿಯ ನಾರಾಯಣರೆಡ್ಡಿ ಬಡಾವಣೆಯಲ್ಲಿ ಸ್ವಂತ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದರು. ಆದರೆ ಅವರು ಅಕ್ರಮವಾಗಿ ಮನೆಯನ್ನು ನಿರ್ಮಾಣ ಮಾಡಿದ್ದಾರೆಂಬ ದೂರು ಬಂದಿತ್ತು.

ನಿಯಮದಂತೆ ಬಿಬಿಎಂಪಿ ನೋಟಿಸ್‌ ನೀಡಿ, ಉತ್ತರ ಪಡೆದು ಆನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕಿತ್ತು. ಆದರೆ ತಮಗೆ ಯಾವುದೇ ನೋಟಿಸ್‌ ನೀಡದೆ ಏಕಾಏಕಿ ಮನೆಯನ್ನು ತೆರವುಗೊಳಿಸಲಾಗಿದೆ ಎಂದು ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು.

ಹಿಂದಿನ ಲೇಖನಸಹಾಯಕ, ಸ್ಟೆನೋಗ್ರಾಫರ್ ಮತ್ತು ಕ್ಲರ್ಕ್​​ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನರಾಹುಲ್ ಗಾಂಧಿ ಸಲಹೆ ಮೇರೆಗೆ ಕಾಡಾನೆ ದಾಳಿಯಿಂದ ಮೃತ ಕೇರಳ ವ್ಯಕ್ತಿಗೆ ಪರಿಹಾರ: ಬಿ ವೈ ವಿಜಯೇಂದ್ರ