ಮನೆ ಕಾನೂನು ಆರ್ಯ ಸಮಾಜದಿಂದ ಅಕ್ರಮ ವಿವಾಹ: ತನಿಖೆಗೆ ಅಲಾಹಾಬಾದ್ ಹೈಕೋರ್ಟ್ ಆದೇಶ

ಆರ್ಯ ಸಮಾಜದಿಂದ ಅಕ್ರಮ ವಿವಾಹ: ತನಿಖೆಗೆ ಅಲಾಹಾಬಾದ್ ಹೈಕೋರ್ಟ್ ಆದೇಶ

0

ಆರ್ಯ ಸಮಾಜ ಮಂದಿರ ಮತ್ತು ಅದರಂತಹ ಸಂಘ ಸಂಸ್ಥೆಗಳು ನಡೆಸುತ್ತಿರುವ ವಿವಾಹಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಅಲಾಹಾಬಾದ್‌ ಹೈಕೋರ್ಟ್‌ ಈಚೆಗೆ ಗೌತಮ ಬುದ್ಧ ನಗರ (ನೋಯ್ಡಾ) ಹಾಗೂ ಗಾಜಿಯಾಬಾದ್‌ ಪೊಲೀಸ್‌ ಆಯುಕ್ತರಿಗೆ ಆದೇಶಿಸಿದೆ

Join Our Whatsapp Group

ಬಾಲ್ಯವಿವಾಹ ತಡೆ ಕಾಯಿದೆ ಮತ್ತು ಹಿಂದೂ ವಿವಾಹ ಕಾಯಿದೆಯ ಸೆಕ್ಷನ್‌ಗಳನ್ನು ಉಲ್ಲಂಘಿಸಿ ಈ ಸಂಸ್ಥೆಗಳಲ್ಲಿ ವಿವಾಹ ಏರ್ಪಡುತ್ತಿದೆ ಎಂದು ವಿವಿಧ ಪ್ರಕರಣಗಳ ಪೊಲೀಸ್ ತನಿಖೆಯಿಂದ ಬಹಿರಂಗವಾದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ವಿನೋದ್ ದಿವಾಕರ್ ಅವರು ಈ ಆದೇಶ ನೀಡಿದ್ದಾರೆ.

ದಂಪತಿ ಸಲ್ಲಿಸುವ ಆಧಾರ್‌ ಕಾರ್ಡ್‌ಗಳು, ನೋಟರಿ ಅಫಿಡವಿಟ್‌ಗಳು ಕೂಡ ನಕಲಿ ಎಂದು ಕಂಡುಬಂದಿದ್ದು ವಿವಾಹ ನೋಂದಣಿ ಅಧಿಕಾರಿಗಳು, ಪರಿಶೀಲನೆ ಮಾಡದೆ ನಕಲಿ ಮತ್ತು ಅಮಾನ್ಯ ವಿವಾಹ ಪ್ರಮಾಣಪತ್ರ ಆಧರಿಸಿ ವಿವಾಹ ನೋಂದಾಯಿಸುತ್ತಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಮೂಲತಃ ಇಂತಹ ವಿವಾಹಗಳು ಮಾನವ ಕಳ್ಳಸಾಗಣೆ, ಲೈಂಗಿಕ ಶೋಷಣೆ ಮತ್ತು ಬಲವಂತದ ದುಡಿಮೆಗೆ ಎಡೆ ಮಾಡಿಕೊಡುತ್ತಿದ್ದು ಸಾಮಾಜಿಕ ಅಸ್ಥಿರತೆ, ಶೋಷಣೆ, ಬಲಾತ್ಕಾರ ಹಾಗೂ ಶಿಕ್ಷಣದ ಅಡಚಣೆಗೆ ಕಾರಣವಾಗುತ್ತಿದೆ. ಅಲ್ಲದೆ ಇಂತಹ ಪ್ರಕರಣಗಳು ನ್ಯಾಯಾಲಯಗಳ ಮೇಲೆ ಭಾರಿ ಹೊರೆ ಉಂಟು ಮಾಡುತ್ತಿವೆ. ಹೀಗಾಗಿ ದಾಖಲೆ ಪರಿಶೀಲನೆ ಮತ್ತು ಸಂಘ ಸಂಸ್ಥೆಗಳ ಹೊಣೆಗಾರಿಕೆಗಾಗಿ ಬಲವಾದ ವ್ಯವಸ್ಥೆ ರೂಪಿಸುವ ಅಗತ್ಯವಿದೆ ಎಂದು ನ್ಯಾಯಾಲಯ ನುಡಿದಿದೆ.

ಅಂತಹ ಸಂಘ ಸಂಸ್ಥೆಗಳ ಹೆಸರು, ಅಲ್ಲಿನ ಪದಾಧಿಕಾರಿಗಳ ವಿವರ, ಓಡಿಹೋದ ಹುಡುಗ ಹುಡುಗಿಯರು ತಮ್ಮ ವಿವಾಹಕ್ಕಾಗಿ ಈ ಸಂಘ ಸಂಸ್ಥೆಗಳನ್ನು ಸಂಪರ್ಕಿಸುವ ರೀತಿ, ನಕಲಿ ಪ್ರಮಾಣಪತ್ರಗಳ ಮೂಲಕ ಅಂತಹ ಜೋಡಿಗೆ ಸಹಾಯ ಮಾಡುವವರ ವಿವರಗಳು, ಸಂಘ ಸಂಸ್ಥೆಗಳ ಹಣಕಾಸಿನ ವಹಿವಾಟು, ದಕ್ಷಿಣೆಯ ಹೆಸರಿನಲ್ಲಿ ಸಂಘಸಂಸ್ಥೆಗಳು ವಿಧಿಸುವ ಶುಲ್ಕ, ನಕಲಿ ದಾಖಲೆಗಳನ್ನು ಸಲ್ಲಿಸಿ ವಿವಾಹವಾಗುವುದರಿಂದ ಹಿಡಿದು ನ್ಯಾಯಾಲಯಕ್ಕೆ ರಕ್ಷಣೆ ಕೋರಿ ಅರ್ಜಿ ಸಲ್ಲಿಸುವವರೆಗೆ ಈ ಅಕ್ರಮ ಜಾಲ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಕುರಿತು ವಿವರವಾದ ತನಿಖೆ ನಡೆಸುವಂತೆ ನ್ಯಾಯಾಲಯ ಸೂಚಿಸಿದೆ.

ಪೊಲೀಸ್ ರಕ್ಷಣೆ ಕೋರಿ ಜೋಡಿಗಳು ನ್ಯಾಯಾಲಯ ಎಡತಾಕಲು ಅನುವಾಗುವಂತೆ ವಿವಿಧ ಸಂಘ ಸಂಸ್ಥೆಗಳು ನಕಲಿ ವಿವಾಹ ಪ್ರಮಾಣ ಪತ್ರ ನೀಡುತ್ತಿವೆ ಎಂದು ಈ ಹಿಂದಿನ ವಿಚಾರಣೆ ವೇಳೆಯೂ ನ್ಯಾಯಮೂರ್ತಿ ದಿವಾಕರ್‌ ಪ್ರಸ್ತಾಪಿಸಿದ್ದರು.

ಆ ವಿಚಾರಣೆ ವೇಳೆ ತಾನು ನೀಡಿದ್ದ ಆದೇಶಕ್ಕೆ ಆದ್ಯತೆ ನೀಡದಿರುವುದನ್ನು ಗಮನಿಸಿದ ನ್ಯಾಯಾಲಯ ತನ್ನ ಸೂಚನೆಗಳನ್ನು ಪಾಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದೆ.