ಬೆಂಗಳೂರು : ಅಕ್ರಮ ಗಣಿಗಾರಿಕೆಯು ಸತತವಾಗಿ ನಡೆಯುತ್ತಿದೆ. ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿಲ್ಲ. ಅಪರಾಧಿಗಳು ತಾಂತ್ರಿಕ ಕ್ರಮದ ಲಾಭ ಪಡೆದು ಹೊರಗಿದ್ದಾರೆ ಎಂದು ಸಚಿವ ಎಚ್.ಕೆ. ಪಾಟೀಲ್ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಕಾಂಗ್ರೆಸ್ ಹತ್ತು ವರ್ಷಗಳ ಹಿಂದೆ ವ್ಯಾಪಕವಾಗಿ ಅಕ್ರಮ ಗಣಿಗಾರಿಕೆಯ ವಿರುದ್ದ ಹೋರಾಟ ನಡೆಸಿತ್ತು. ಬಳ್ಳಾರಿಗೆ ಪಾದಯಾತ್ರೆ ನಡೆಸಿ ಇಡೀ ದೇಶದ ಗಮನವನ್ನು ಸೆಳೆದಿತ್ತು. ಆದರೆ ಪ್ರಕರಣವು ಅಲ್ಲಿಗೆ ನಿಂತು ಹೋಗಿಲ್ಲ. ಕಾಂಗ್ರೆಸ್ ಈ ಬಗ್ಗೆ ಮತ್ತೆ ಗಮನ ಹರಿಸಿ ಅಕ್ರಮ ಗಣಿಗಾರಿಕೆಗೆ ತಡೆಹಾಕಬೇಕೆಂದು ಎಚ್.ಕೆ. ಪಾಟೀಲ್ ತಮ್ಮ ಏಳು ಪುಟಗಳ ಸುಧೀರ್ಘ ಪತ್ರದಲ್ಲಿ ವಿವರಿಸಿದ್ದಾರೆ.
ಇದುವರೆಗೂ ಅಕ್ರಮ ಗಣಿಗಾರಿಕೆಯಲ್ಲಿ ಶಿಕ್ಷೆಯಾಗಿರುವ ಅಪರಾಧಿಗಳ ಪ್ರಮಾಣ ಶೇ 0.02 ರಷ್ಟು ಮಾತ್ರ. ಈಗಲೂ ರಾಜ್ಯದ ಸಂಪತ್ತನ್ನು ಲೂಟಿ ಹೊಡೆಯಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಈ ಕುರಿತು ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಎಚ್.ಕೆ. ಪಾಟೀಲ್ ಪತ್ರದಲ್ಲಿ ಆಗ್ರಹಿಸಿದ್ದಾರೆ.














