ಬೆಂಗಳೂರು (Bengaluru): ಹಣದ ಅಕ್ರಮ ವರ್ಗಾವಣೆ ಆರೋಪದ ಮೇಲೆ ರೇಜರ್ ಪೇ, ಕ್ಯಾಶ್ ಫ್ರೀ ಮತ್ತು ಪೇಟಿಎಂ ಪೇಮೆಂಟ್ ಸರ್ವಿಸಸ್ ಕಚೇರಿಗಳಲ್ಲಿ ಶೋಧ ನಡೆಸಿರುವ ಜಾರಿ ನಿರ್ದೇಶನಾಲಯ (ಇ.ಡಿ), ಈ ಕಂಪನಿಗಳ ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ 17 ಕೋಟಿ ರೂ. ಅನ್ನು ಜಪ್ತಿ ಮಾಡಲಾಗಿದೆ.
ಮೊಬೈಲ್ ಅಪ್ಲಿಕೇಷನ್ ಮೂಲಕ ಸಾಲ ನೀಡಿ, ಕಿರುಕುಳ ನೀಡುತ್ತಿರುವ ಸಂಸ್ಥೆಗಳ ವಿರುದ್ಧ ನಗರದ ಸಿಸಿಬಿ ಪೊಲೀಸರು ದಾಖಲಿಸಿರುವ 18 ಎಫ್‌ಐಆರ್‌ಗಳ ಅಡಿಯಲ್ಲಿ ನಡೆದಿರುವ ತನಿಖೆಯಲ್ಲಿ ಪತ್ತೆಯಾಗಿರುವ ಅಂಶವನ್ನು ಆಧರಿಸಿ ಇ.ಡಿ ಪ್ರತ್ಯೇಕ ತನಿಖೆ ಆರಂಭಿಸಿದೆ. ಅದರ ಭಾಗವಾಗಿ ನಗರದಲ್ಲಿರುವ ರೇಜರ್ ಪೇ, ಕ್ಯಾಶ್ ಫ್ರೀ ಮತ್ತು ಪೇಟಿಎಂ ಕಚೇರಿಗಳಲ್ಲಿ ಶೋಧ ನಡೆಸಲಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಈ ಕಂಪನಿಗಳು ನೋಂದಾಯಿತ ವಿಳಾಸದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಬೇರೆ ಸಂಸ್ಥೆಗಳ ನೆರವಿನಲ್ಲಿ ಸಾಲ ನೀಡುವುದು, ಸಾಲ ವಸೂಲಿ ಹೆಸರಿನಲ್ಲಿ ಜನರಿಗೆ ಕಿರುಕುಳ ನೀಡುತ್ತಿರುವುದೂ ಪತ್ತೆಯಾಗಿದೆ. ಭಾರತೀಯ ನಾಗರಿಕರ ದಾಖಲೆಗಳನ್ನು ನಕಲು ಮಾಡಿ ದುಷ್ಕೃತ್ಯಕ್ಕೆ ಬಳಸುತ್ತಿರುವುದೂ ಕಂಡುಬಂದಿದೆ ಎಂದು ಮಾಹಿತಿ ನೀಡಿದೆ.
ಚೀನಾದ ವ್ಯಕ್ತಿಗಳ ನಿಯಂತ್ರಣದಲ್ಲಿರುವ ಈ ಮೊಬೈಲ್ ಅಪ್ಲಿಕೇಷನ್‌ಗಳನ್ನು ಬಳಸಿಕೊಂಡು ಸಾಲ ನೀಡಿ, ನಂತರದಲ್ಲಿ ಜನರಿಗೆ ಕಿರುಕುಳ ನೀಡುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಅಂತಹ ಕಂಪನಿಗಳು ಕೆಲವು ಸಂಸ್ಥೆಗಳನ್ನು ಬಳಸಿಕೊಂಡು ವಹಿವಾಟು ನಡೆಸುತ್ತಿರುವುದು ಕಂಡುಬಂದಿದೆ. ಈ ಮಾಹಿತಿ ಆಧರಿಸಿ ಆರು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಇ.ಡಿ ಹೇಳಿದೆ.