ಮಡಿಕೇರಿ(Madikeri): ಅಕ್ರಮವಾಗಿ ಚಿಪ್ಪು ಹಂದಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವೀರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಘಟಕದ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.
ವೀರಾಜಪೇಟೆಯ ಚೆನ್ನಂಗಿ ಗ್ರಾಮದ ರಾಜು ಹಾಗೂ ಸೋಮವಾರಪೇಟೆ ತಾಲೂಕಿನ ಕಟ್ಟೆಪುರ ಗ್ರಾಮದ ಧರ್ಮ ಬಂಧಿತ ಆರೋಪಿಗಳು.
ಆರೋಪಿಗಳು ಅತ್ತೂರು ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಮುಂಭಾಗ ಪ್ಲಾಸ್ಟಿಕ್ ಚೀಲದ ಒಳಗೆ ಪೆಂಗೋಲಿನ್(ಚಿಪ್ಪು ಹಂದಿಯ ಚಿಪ್ಪು) ಚಿಪ್ಪುಗಳನ್ನು ಇಟ್ಟು ಗಿರಾಕಿಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಸಂದರ್ಭ ಖಚಿತ ಮಾಹಿತಿ ಮೇರೆಗೆ ವೀರಾಜಪೇಟೆ ತಾಲೂಕು ಸಿ.ಐ.ಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿ ದಾಳಿ ನಡೆಸಿ ಮಾಲು ಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಪೊನ್ನಂಪೇಟೆ ಪ್ರಧಾನ ಸಿವಿಲ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.