ಮನೆ ಸ್ಥಳೀಯ ನ್ಯಾಯಾಲಯದ ತಡೆಯಾಜ್ಞೆ ಖುಲಾಸೆ ಆಗದೆ ಮಹಿಳಾ ಸಿಬ್ಬಂದಿಗೆ ಅಕ್ರಮ ಪದೋನ್ನತಿ: ರಾಜ್ಯ ಪಾಲರಿಗೆ ದೂರು

ನ್ಯಾಯಾಲಯದ ತಡೆಯಾಜ್ಞೆ ಖುಲಾಸೆ ಆಗದೆ ಮಹಿಳಾ ಸಿಬ್ಬಂದಿಗೆ ಅಕ್ರಮ ಪದೋನ್ನತಿ: ರಾಜ್ಯ ಪಾಲರಿಗೆ ದೂರು

0

ಮೈಸೂರು: ಕಳೆದ 7 ವರ್ಷಗಳಿಂದ ನ್ಯಾಯಾಲಯದ ತಡೆಯಾಜ್ಞೆ ಖುಲಾಸೆ ಆಗದೆಯೂ ತನ್ನ ಮಹಿಳಾ ಸಿಬ್ಬಂದಿಯೊಬ್ಬರಿಗೆ ಅಕ್ರಮವಾಗಿ ಹಿಂದಿಂದೆ ಪದೋನ್ನತಿಗಳನ್ನು ನೀಡಿ ಮೈಸೂರು ವಿಶ್ವವಿದ್ಯಾನಿಲಯ ಇತಿಹಾಸವನ್ನೇ ಸೃಷ್ಟಿಸಿದೆ.

Join Our Whatsapp Group

ಎನ್. ನಿರ್ಮಲರವರು Typist-cum-Clerk (TCC) ಆಗಿ 2006ರ ಆಗಸ್ಟ್ 1 ರಂದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಖಾಯಂ ಹುದ್ದೆಗೆ ನೇಮಕಗೊಂಡಿದ್ದು, ಇವರು ಶೀಘ್ರಲಿಪಿಗಾರ ಹುದ್ದೆಗೆ ವಿದ್ಯಾರ್ಹತೆ ಹೊಂದಿರುತ್ತಾರೆಂದು ನೇಮಕಗೊಂಡ ಎರಡು ವರ್ಷಗಳ ನಂತರ ಅದೇ ದಿನಾಂಕದಿಂದ ಜಾರಿಗೆ ಬಂದಂತೆ ಆರ್ಥಿಕ ಸೌಲಭ್ಯಗಳನ್ನೊಳಗೊಂಡಂತೆ ಶೀಘ್ರಲಿಪಿಗಾರರಾಗಿ ವಿ.ವಿ. ಪದೋನ್ನತಿಯನ್ನು ನೀಡಿ ಜೇಷ್ಠತೆಯಲ್ಲಿ ಹಿರಿಯ ಸಿಬ್ಬಂದಿಗಳ (ಪದೋನ್ನತಿ ವಂಚಿತರ) ಕೆಂಗಣ್ಣಿಗೆ ಗುರಿಯಾಗಿರುತ್ತದೆ.

ಈ ಸಂಬಂಧ ಸತ್ಯನಾರಾಯಣ ಆರ್.ಎನ್ ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಮಾಹಿತಿ ಪಡೆದುಕೊಂಡು ಆಗಿರುವ ತಪ್ಪನ್ನು ಸರಿಪಡಿಸುವಂತೆ ದಾಖಲೆಗಳ ಸಹಿತ ದೂರು ಸಲ್ಲಿಸಿದ್ದಾರೆ.
ದೂರಿನನ್ವಯ ನಿರ್ಮಲ ರವರಿಗೆ ನೀಡಿದ ಪದೋನ್ನತಿಯನ್ನು ಹಿಂಪಡೆದು ಇದುವರೆಗೆ ಪಾವತಿಸಿರುವ ಹೆಚ್ಚುವರಿ ಆರ್ಥಿಕ ಸೌಲಭ್ಯವನ್ನು ಲೆಕ್ಕಾಚಾರ ಮಾಡಿ ವೇತನದಿಂದ ಕಡಿತಗೊಳಿಸಲು 2018 ಜನವರಿ 18 ರಂದು ಆದೇಶ ಹೊರಡಿಸಲಾಗಿತ್ತು. ಈ ಆದೇಶದ ವಿರುದ್ಧ ಎನ್. ನಿರ್ಮಲ ರವರು 2018 ಏಪ್ರಿಲ್ 27 ರಂದು ಕರ್ನಾಟಕ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ಪಡೆದುಕೊಂಡಿರುತ್ತಾರೆ.

ತಡೆಯಾಜ್ಞೆ ಪಡೆದು 7 ವರ್ಷಗಳೇ ಆಗಿದ್ದರೂ ನಿರ್ಮಲರವರಾಗಲೀ ವಿ.ವಿ.ಯಾಗಲೀ ತಡೆಯಾಜ್ಞೆ ತೆರವುಗೊಳಿಸದಿರುವ ದೀರ್ಘ ವಿಳಂಬ ಧೋರಣೆ ಅನುಮಾನಕ್ಕೆ ಆಸ್ಪದವಾಗಿದೆ. ತಡೆಯಾಜ್ಞೆ ತೆರವಾದರೆಷ್ಟು? ಆಗದಿದ್ದರೆಷ್ಟು? ನಿರ್ಮಲರವರಿಗೆ ವೇತನದಲ್ಲಿ ಯಾವುದೇ ನಷ್ಟವಿಲ್ಲದೆ ಮಾಸಿಕ ವೇತನ ಮತ್ತು ಅವರಿಗೆ ಸಲ್ಲಬೇಕಾದ ಆರ್ಥಿಕ ಸೌಲಭ್ಯಗಳೆಲ್ಲವೂ ಕಾಲ ಕಾಲಕ್ಕೆ ಪಾವತಿಯಾಗುತ್ತಿರುತ್ತದೆ. ಉದ್ಯೋಗದಾತ ವಿಶ್ವವಿದ್ಯಾನಿಲಯದ ಆದೇಶವನ್ನೇ ಸವಾಲು ಹಾಕಿ ನ್ಯಾಯಾಲಯದಿಂದ ತೆರವುಗೊಳಿಸುವ ಕ್ಷಿಪ್ರ ಪ್ರಯತ್ನವನ್ನೂ ಮಾಡದೆ ಏನೂ ಆಗಿಲ್ಲವೆಂಬಂತೆ ನಿರ್ಮಲ ರವರನ್ನೇ ಪೋಷಿಸಿ, ಬೆಳೆಸುತ್ತಿರುವ ವಿಶ್ವವಿದ್ಯಾನಿಲಯದ ಮೇಲೆ ಗುಮಾನಿ ಆಗುತ್ತದೆ.
ಐದು ವರ್ಷಗಳಿಂದಲೂ ತಡೆಯಾಜ್ಞೆ ತೆರವುಗೊಳಿಸಿರುವುದಿಲ್ಲವೆಂದು ಈ ಸಂಬಂಧ ಎರಡು ವರ್ಷಗಳ ಹಿಂದೆ ಕುಲಸಚಿವರಿಗೆ ದಾಖಲೆಗಳನ್ನು ಒದಗಿಸಿ 2018 ಏಪ್ರಿಲ್ 22 ರ ವಿವಿಯ ಆದೇಶ ಪಾಲಿಸುವಂತೆ ನಾನು 2023ರ ಏಪ್ರಿಲ್ 5 ರಂದು ಕೋರಿಕೆ ಸಲ್ಲಿಸಿರುತ್ತೇನೆ. ವಿವಿ ನೇಮಿಸಿಕೊಂಡಿರುವ ವಕೀಲರೊಂದಿಗೆ ಈಗಾಗಲೇ ಸಮಾಲೋಚಿಸಿ ತಡೆಯಾಜ್ಞೆ ತೆರವುಗೊಳಿಸಿ ಇತ್ಯರ್ಥಗೊಳಿಸುವಂತೆ ಸೂಚನೆ ನೀಡಿರುವುದಾಗಿ ನನ್ನ ಕೋರಿಕೆಯ ಎರಡು ತಿಂಗಳುಗಳ ನಂತರ 2023ರ ಜೂನ್ 2 ರಂದು ಹಿಂಬರಹ ನೀಡಿರುತ್ತಾರೆ. ಆನಂತರವೂ ತಡೆಯಾಜ್ಞೆ ತೆರವುಗೊಳಿಸದೆ ಈಗ 7 ವರ್ಷಗಳೇ ಕಳೆದಿದ್ದರೂ, ತಡೆಯಾಜ್ಞೆ ಇದ್ದಾಗ್ಯೂ ಇದೇ ಕುಲಸಚಿವರು Back to Back ಎರಡು ಪದೋನ್ನತಿಗಳನ್ನು ನೀಡಿ ಮೈಸೂರು ವಿಶ್ವವಿದ್ಯಾನಿಲಯ ನ್ಯಾಯಾಲಯ ನಿಂದನೆಗೆ ಗುರಿಯಾಗಿರುತ್ತದೆ.
ಈ ಅಕ್ರಮ ಪದೋನ್ನತಿಗೆ ಕೈ ಜೋಡಿಸಿದ / ಸಾಥ್ ನೀಡಿದ ಕಛೇರಿ ಸಿಬ್ಬಂದಿಗಳೂ ವಿವಿ ಕುಲಪತಿಗಳ ಗಮನಕ್ಕೂ ಬಾರದಂತೆ ಜಾಣತನದಿಂದ ಎಚ್ಚರ ವಹಿಸಿ ಕಛೇರಿ ಕಡತದಲ್ಲಿ ಟಿಪ್ಪಣಿ ದಾಖಲಿಸದೆ ಎಂ. ನಿರ್ಮಲ ರವರಿಗೆ ಮುಂಬಡ್ತಿ ನೀಡಲು ಕುತಂತ್ರ ಮಾಡಿರುವ ವಿಚಾರಹೀನ ಅವಿವೇಕಿ ಸಿಬ್ಬಂದಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸುವಂತೆ ಮತ್ತು ಪದೋನ್ನತಿ ನೀಡಿರುವ ನಿರ್ಮಲ ರವರ ಪದನೋನ್ನತಿಯನ್ನು ಹಿಂಪಡೆದು ವಿವಿ ನೀಡಲಾಗಿದ್ದ ಆರ್ಥಿಕ ಸೌಲಭ್ಯವನ್ನು ಸೇವೆಯಿಂದ ಮುಂದಿನ ಎರಡು ವರ್ಷಗಳಲ್ಲಿ ನಿವೃತ್ತರಾಗಲಿರುವ ನಿರ್ಮಲ ರವರಿಂದ ಹಿಂಪಡೆದು ವಿವಿಗೆ ಉಂಟಾಗುವ ಆರ್ಥಿಕ ನಷ್ಟವನ್ನು ವಸೂಲಿಸುವಂತೆ ಆಗ್ರಹಿಸಿ ರಿಜಿಸ್ಟ್ರಾರ್, ಕುಲಪತಿ, ವಿಶ್ವವಿದ್ಯಾನಿಲಯಗಳ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರಿಗೆ ಮತ್ತು ಉನ್ನತ ಶಿಕ್ಷಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು (ವಿವಿ) ಇವರಿಗೆ ಸತ್ಯನಾರಾಯಣ ಆರ್.ಎನ್ ದಾಖಲೆಗಳ ಸಹಿತ ದೂರು ಸಲ್ಲಿಸಿದ್ದಾರೆ.

ಕರ್ನಾಟಕ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ಇದ್ದರೂ ತೆರವುಗೊಳಿಸದೆ ಪದೋನ್ನತಿ ನೀಡಿರುವ ಮೈಸೂರು ವಿಶ್ವವಿದ್ಯಾನಿಲಯದ ವಿರುದ್ಧ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ದಾಖಲೆಗಳನ್ನು ಒದಗಿಸಿ ದೂರು ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.