ಜೈಪುರ: ರಾಜಸ್ಥಾನದಲ್ಲಿ ‘ಜಲ ಜೀವನ್ ಮಿಷನ್’ (ಜೆಜೆಎಂ) ಯೋಜನೆಯಡಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿಯನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬಂಧಿಸಿದ್ದಾರೆ.
ಮಧ್ಯವರ್ತಿ ಸಂಜಯ್ ಬಡಾಯ ಎಂಬವರನ್ನು ಬಂಧಿಸಿರುವ ಇ.ಡಿ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಇದರೊಂದಿಗೆ ರಾಜಸ್ಥಾನ ಜಲ ಜೀವನ್ ಮಿಷನ್ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಕೇಂದ್ರ ತನಿಖಾ ಸಂಸ್ಥೆ ಇ.ಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶ್ರೀ ಗಣಪತಿ ಟ್ಯೂಬ್‌ವೆಲ್ ಕಂಪನಿಯ ಮಾಲಿಕ ಮಹೇಶ್ ಮಿತ್ತಲ್, ಶ್ರೀ ಶ್ಯಾಮ್ ಟ್ಯೂಬೆವೆಲ್ ಕಂಪನಿಯ ಮಾಲೀಕ ಪದಮ್ ಚಂದ್ ಜೈನ್ ಮತ್ತು ಪಿಯೂಷ್ ಜೈನ್ ಎಂಬವರನ್ನು ಬಂಧಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಫ್‌ಐಆರ್ ದಾಖಲಿಸಿದೆ. ಇದರ ಬೆನ್ನಲ್ಲೇ ವಿವಿಧೆಡೆ ದಾಳಿ ನಡೆಸಿರುವ ಇ.ಡಿ. ಈವರೆಗೆ ₹11.03 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.
ರಾಜಸ್ಥಾನ ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ರಾಜಸ್ಥಾನದ ಮಾಜಿ ಸಚಿವ ಮಹೇಶ್ ಜೋಶಿ ಮತ್ತು ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಬೋಧ್ ಅಗರವಾಲ್ ಅವರ ನಿವಾಸ ಸೇರಿದಂತೆ ಜೈಪುರ ಹಾಗೂ ದೌಸಾದಲ್ಲಿ ಇ.ಡಿ ವ್ಯಾಪಕ ಶೋಧ ನಡೆಸಿತ್ತು.