ಮನೆ ಕಾನೂನು ಕೊಲೆಯಲ್ಲಿ ಅಂತ್ಯವಾಗಿದ್ದ ಅಕ್ರಮ ಸಂಬಂಧ: ಆರೋಪಿಗೆ ಜೀವಾವಧಿ ಶಿಕ್ಷೆ

ಕೊಲೆಯಲ್ಲಿ ಅಂತ್ಯವಾಗಿದ್ದ ಅಕ್ರಮ ಸಂಬಂಧ: ಆರೋಪಿಗೆ ಜೀವಾವಧಿ ಶಿಕ್ಷೆ

0

ಅಕ್ರಮ ಸಂಬಂಧದಲ್ಲಿದ್ದ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿ, ಎರಡು ದಿನಗಳ ಕಾಲ ಶವದೊಂದಿಗೇ ವಾಸವಿದ್ದ ವ್ಯಕ್ತಿಗೆ ಬೆಂಗಳೂರಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.

ಬೆಂಗಳೂರಿನ ದೊಡ್ಡಬಿದರಕಲ್ಲು ನಿವಾಸಿಯಾಗಿದ್ದ ರಾಮಸ್ವಾಮಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ. ಈತನ ಕೊಲೆ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ನಗರದ 57ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶ ಟಿ. ಗೋವಿಂದಯ್ಯ ಅವರು ಶಿಕ್ಷೆ ವಿಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಪತಿಯನ್ನು ತೊರೆದು ಬಂದಿದ್ದ ಕೋಲಾರ ಮೂಲದ ಜಯಲಕ್ಷ್ಮಿ, ಪರಿಚಯದ ರಾಮಸ್ವಾಮಿ ಎಂಬಾತನೊಂದಿಗೆ ಬೆಂಗಳೂರಿನ ದೊಡ್ಡಬಿದರಕಲ್ಲಿನ ಭೈರವೇಶ್ವರ ನಗರದಲ್ಲಿ ಕಳೆದ 5 ವರ್ಷಗಳಿಂದ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು.

ಆಗಾಗ್ಗೆ ರಾಮಸ್ವಾಮಿಯೊಂದಿಗೆ ಜಗಳ ಮಾಡಿಕೊಂಡು ಮನೆಯಿಂದ ಹೊರಟು ಹೋಗುತ್ತಿದ್ದರು. 2015 ರ ಮಾರ್ಚ್ 3 ರಂದು ರಾಮಸ್ವಾಮಿ ಬೀರುವಿನಲ್ಲಿಟ್ಟಿದ್ದ ಹಣ ತೆಗೆದುಕೊಂಡು ಹೋಗಿದ್ದರು.

ಮನೆಗೆ ವಾಪಸ್ಸಾದ ಬಳಿಕ ರಾಮಸ್ವಾಮಿ ಹಾಗೂ ಜಯಲಕ್ಷ್ಮಿ ನಡುವಿನ ಜಗಳ ವಿಕೋಪಕ್ಕೆ ತಿರುಗಿತ್ತು. 2015 ಮಾರ್ಚ್ 11 ರ ಸಂಜೆ ಹಣದ ವಿಚಾರವಾಗಿ ಜಗಳ ನಡೆದು, ರಾಮಸ್ವಾಮಿ ಅಡುಗೆ ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ಬಂದು ಜಯಲಕ್ಷ್ಮಿ ಕುತ್ತಿಗೆಗೆ ಇರಿತು ಹತ್ಯೆ ಮಾಡಿದ್ದ.

ಹತ್ಯೆ ನಂತರ ರಾಮಸ್ವಾಮಿ ಎರಡು ದಿನಗಳ ಕಾಲ ಶವದೊಂದಿಗೇ ವಾಸವಿದ್ದ. ಮೃತ ದೇಹದಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳಲು ಆರಂಭಿಸಿದ ನಂತರ ಪೀಣ್ಯ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಣ್ಯ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು.

ಆರೋಪಿ ರಾಮಸ್ವಾಮಿ ಕೊಲೆ ಮಾಡಿರುವುದು ನ್ಯಾಯಾಲಯದ ವಿಚಾರಣೆ ವೇಳೆ ದೃಢಪಟ್ಟಿದ್ದರಿಂದ ಕೋರ್ಟ್ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ. ಪ್ರಕರಣದಲ್ಲಿ ಅಭಿಯೋಜನೆ ಪರ ಸರ್ಕಾರಿ ಅಭಿಯೋಜಕಿ ಕೆ.ಎಸ್ ವೀಣಾ ವಾದ ಮಂಡಿಸಿದ್ದರು.