ಕೀವ್: ನಾನು ಈಗಲೂ ಕೀವ್ ನಗರದಲ್ಲೇ ಇದ್ದೇನೆ, ಅಡಗಿ ಕುಳಿತಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತಿಳಿಸಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ 13ನೇ ದಿನಕ್ಕೆ ಕಾಲಿಟ್ಟಿದೆ. ಇದೇ ವೇಳೆ ದೇಶದ ಜನರನ್ನುದ್ದೇಶಿಸಿ ಸೋಮವಾರ ತಡರಾತ್ರಿ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೊದಲ್ಲಿ, ರಾಜಧಾನಿಯ ಮಧ್ಯಭಾಗದಲ್ಲಿರುವ ತನ್ನ ಕಚೇರಿಯ ಸುತ್ತಲಿನ ದೃಶ್ಯವನ್ನು ತೋರಿಸಿದ್ದಾರೆ.
‘ನಾನು ಕೀವ್‌ನ ಬಂಕೊವಾ ಬೀದಿಯಲ್ಲಿ ಉಳಿದುಕೊಂಡಿದ್ದೇನೆ. ನಾನು ಅಡಗಿಕೊಂಡಿಲ್ಲ. ಮತ್ತು ನಾನು ಯಾರಿಗೂ ಹೆದರುವುದಿಲ್ಲ. ನಮ್ಮ ದೇಶಭಕ್ತಿಯ ಯುದ್ಧವನ್ನು ಗೆಲ್ಲಲು ಎಷ್ಟು ಸಮಯ ಬೇಕಾಗುತ್ತದೋ ಅಲ್ಲಿಯವರೆಗೆ ಇಲ್ಲಿಯೇ ಇರುತ್ತೇನೆ ‘ ಎಂದಿದ್ದಾರೆ.
ಕದನಕ್ಕೆ ವಿರಾಮ ನೀಡುವ ನಿಟ್ಟಿನಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಬೆಲಾರಸ್-ಪೋಲೆಂಡ್ ಗಡಿಯಲ್ಲಿ ಸುಮಾರು 3 ಗಂಟೆಗಳ ಕಾಲ ನಡೆದ ಮೂರನೇ ಸುತ್ತಿನ ಮಾತುಕತೆ ಕೂಡ ವಿಫಲವಾಗಿದೆ. ಇದಾದ ಕೆಲ ಗಂಟೆಗಳ ನಂತರ ಝೆಲೆನ್‌ಸ್ಕಿ ವಿಡಿಯೊ ಸಂದೇಶ ನೀಡಿದ್ದಾರೆ.
‘ಉಭಯ ದೇಶಗಳ ನಡುವಿನ ಮಾತುಕತೆಯು ರಾಜಕೀಯ ಮತ್ತು ಮಿಲಿಟರಿ ವಿಚಾರಗಳ ಕುರಿತು ಮುಂದುವರಿದಿದೆ. ಮಾತುಕತೆಯಿಂದ ಯಾವುದೇ ಪರಿಹಾರ ಲಭ್ಯವಾಗಿಲ್ಲ. ಈಗಲೇ ಏನನ್ನೂ ಹೇಳಲಾಗುವುದಿಲ್ಲ’ ಎಂದು ರಷ್ಯಾ ಅಧ್ಯಕ್ಷರ ಸಹಾಯಕ ಮತ್ತು ಮಾಸ್ಕೋ ನಿಯೋಗದ ಮುಖ್ಯಸ್ಥರೂ ಆಗಿರುವ ವ್ಲಾಡಿಮಿರ್ ಮೆಡಿನ್‌ಸ್ಕಿ ತಿಳಿಸಿದ್ದಾರೆ.
ನಿರ್ದಿಷ್ಟ ಒಪ್ಪಂದಗಳು ಸೇರಿದಂತೆ ರಷ್ಯಾ ದೊಡ್ಡ ಪ್ರಮಾಣದ ದಾಖಲೆಗಳನ್ನು ತಂದಿತ್ತು. ಆದರೆ ಉಕ್ರೇನ್ ಇವುಗಳಿಗೆ ಅಲ್ಲಿಯೇ ಸಹಿ ಹಾಕಲಿಲ್ಲ ಮತ್ತು ಈ ಎಲ್ಲ ದಾಖಲೆಗಳನ್ನು ಅಧ್ಯಯನಕ್ಕಾಗಿ ಕೊಂಡೊಯ್ದಿದೆ. ಉಭಯ ದೇಶಗಳೂ ನಾಗರಿಕರ ಸುರಕ್ಷಿತ ಸ್ಥಳಾಂತರದ ಬಗ್ಗೆ ಮಾತನಾಡಿವೆ’ ಎಂದಿದ್ದಾರೆ.