ಮನೆ ರಾಜಕೀಯ ಸಚಿವ ಈಶ್ವರಪ್ಪ ಪರ ವಕೀಲಿಕೆ ಮಾಡುತ್ತಿಲ್ಲ: ಹೆಚ್.ಡಿ.ಕುಮಾರಸ್ವಾಮಿ

ಸಚಿವ ಈಶ್ವರಪ್ಪ ಪರ ವಕೀಲಿಕೆ ಮಾಡುತ್ತಿಲ್ಲ: ಹೆಚ್.ಡಿ.ಕುಮಾರಸ್ವಾಮಿ

0

ಬೆಂಗಳೂರು: ರಾಷ್ಟ್ರಧ್ವಜದ ವಿಷಯದಲ್ಲಿ ನಾನು ಸಚಿವ ಕೆ ಎಸ್ ಈಶ್ವರಪ್ಪ ಅವರ ಪರ ವಕೀಲಿಕೆ ಮಾಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು; ನಾನು ಇರುವ ವಿಷಯವನ್ನು ಇದ್ದ ಹಾಗೆ ಹೇಳಿದ್ದೇನೆ. ಈಶ್ವರಪ್ಪ ಅವರು ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ  ಸಹಜವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅವರೇನೂ ದ್ವಜಕ್ಕೆ ಅಪಮಾನ ಆಗುವಂತಹ ಹೇಳಿಕೆ ಕೊಟ್ಟಿಲ್ಲ. ಹಾಗಂತ ನಾನೇನೂ ಈಶ್ವರಪ್ಪ ಪರ ವಕೀಲಿಕೆ ಮಾಡುತ್ತಿಲ್ಲ ಎಂದರು.

ದ್ವಜದ ಬಗ್ಗೆ ಅಷ್ಟೊಂದು ಹೇಳುವ  ಕಾಂಗ್ರೆಸ್ ನಾಯಕರು, ಸದನದ ಬಾವಿಯಲ್ಲಿ ರಾಷ್ಟ್ರಧ್ವಜ ಹಾರಿಸುತ್ತ ಪ್ರತಿಭಟನೆ ಮಾಡಿದರು. ಇದು ರಾಷ್ಟ್ರಧ್ವಜಕ್ಕೆ ನೀಡುವ ಗೌರವವೇ? ಸುಖಾ ಸುಮ್ಮನೆ ಸದನದ ಕಲಾಪ ವ್ಯರ್ಥ ಮಾಡದೇ ಹೈಕೋರ್ಟ್ ನಲ್ಲಿ ಪಿಐಎಲ್ ಹಾಕಿ ಹೋರಾಟ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿಗಳು ಟಾಂಗ್ ನೀಡಿದರು.

ಪ್ರತಿಷ್ಠೆಗೆ ಬಿದ್ದು ಮಂತ್ರಿಯ ರಾಜೀನಾಮೆ ಪಡೆಯಲು ಹೊರಟ ಕಾಂಗ್ರೆಸ್ ನಡೆಯನ್ನು ಜನ ಗಮನಿಸುತ್ತಾ ಇದ್ದಾರೆ. ಕಲಾಪಕ್ಕೆ ಅಡ್ಡಿ ಮಾಡುವವರನ್ನು ಸದನದಿಂದ  ಅಮಾನತು ಮಾಡಿ, ಆ ನಂತರ ಸದನ ನಡೆಸಿ ಎಂದು  ಸಭಾಧ್ಯಕ್ಷರಿಗೂ ಮನವಿ ಮಾಡುತ್ತೇನೆ. ಕೋವಿಡ್ ಅನಾಹುತ ಸಂದರ್ಭದಲ್ಲಿ ಆಗುತ್ತಿರುವ ಮತ್ತೊಂದು ‘ ರಾಜಕೀಯ ಕೋವಿಡ್ ದುರಂತ ‘ ಇದು. ಈ ವಿನಾಶಕಾರಿ  ಕೋವಿಡ್ ಅನ್ನು ಎಲ್ಲಾ ಸೇರಿ ಹರಡಿಸಬೇಡಿ ಎಂದು ಕುಮಾರಸ್ವಾಮಿ ಅವರು ಖಾರವಾಗಿ ಪ್ರತಿಕ್ರಿಯಿಸಿದರು.

ನಾವು ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸದನಕ್ಕೆ ಬಂದಿದ್ದೆವು. ಆದರೆ ಇವರು ಹಿಜಾಬ್ ಮತ್ತು ಕೇಸರಿ ಶಾಲು ಎಂದು ಕಲಾಪವನ್ನು ಹಾಳು ಮಾಡಿದರು. ಆಮೇಲೆ ಸಚಿವರ ರಾಷ್ಟ್ರಧ್ವಜದ ಹೇಳಿಕೆ ಇಟ್ಟುಕೊಂಡು ಎರಡು ದಿನಗಳ ಕಲಾಪವನ್ನು ಹಾಳುಗೆಡವಿದರು. ಇದನ್ನು ಒಪ್ಪಲು ಸಾಧ್ಯವೇ? ತಪ್ಪು ಎಂದಿದ್ದಕ್ಕೆ ಕಾಂಗ್ರೆಸ್ ನಾಯಕರು ಈಗ ಬೇರೆ ರಾಗ ಹಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಕರಾವಳಿಯ ಒಂದು ಭಾಗದಲ್ಲಿ ಶುರುವಾದ ಹಿಜಾಬ್ ಗೊಂದಲ ಮತ್ತಿತರ ಭಾಗದವರಿಗೆ ಪ್ರೇರೇಪಣೆ ಕೊಟ್ಟಂತೆ ಆಗಿದೆ. ಆ ಪ್ರದೇಶದ ಕೆಲ ಭಾಗದಲ್ಲಿ ಮಕ್ಕಳು ಹಿಜಾಬ್ ಧರಿಸಿ ಶಾಲೆಗೆ ಹೋಗುತ್ತಿದ್ದರು. ತರಗತಿ ಪ್ರವೇಶ ಮಾಡುವ ಸಮಯದಲ್ಲಿ ಹಿಜಾಬ್ ತೆಗೆದು, ಮನೆಗೆ ಹೋಗುವಾಗ ಮತ್ತೆ ಧರಿಸಿ ಹೋಗುತ್ತಿದ್ದರು.

ಆರಂಭದಲ್ಲೇ ಚಿವುಟಿ ಹಾಕಬಹುದಾಗಿದ್ದ ವಿವಾದ ಎರಡು ಧರ್ಮದವರ ಸಂಘರ್ಷಕ್ಕೆ ಕಾರಣವಾಗಿದೆ. ಮಕ್ಕಳ ಮನಸ್ಸಲ್ಲಿ ದ್ವೇಷ ಭಿತ್ತಲಾಗಿದೆ. ಕೆಲ ಸಂಘಟನೆಗಳು ಇದನ್ನು ಮತಬ್ಯಾಂಕ್ ಆಗಿ ಪರಿವರ್ತನೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿವೆ. ಕಳೆದ ಎರಡು ದಿನಗಳಿಂದ ಎರಡು ಸದನದಲ್ಲಿ ಕಲಾಪಗಳು ಸ್ಥಗಿತಗೊಳಿಸುವ ಹಾಗೆ ಕಾಂಗ್ರೆಸ್ ನಡವಳಿಕೆ ಇದೆ. ಜನರು ಇದನ್ನು ಕ್ಷಮಿಸುವುದಿಲ್ಲ ಎಂದರು ಕುಮಾರಸ್ವಾಮಿ ಅವರು.