ಮನೆ ರಾಷ್ಟ್ರೀಯ ನಾನು ಅಪೇಕ್ಷೆ ಪಟ್ಟು ನಿಂತಿರುವ ಚುನಾವಣೆ ಅಲ್ಲ: ಮಲ್ಲಿಕಾರ್ಜುನ ಖರ್ಗೆ

ನಾನು ಅಪೇಕ್ಷೆ ಪಟ್ಟು ನಿಂತಿರುವ ಚುನಾವಣೆ ಅಲ್ಲ: ಮಲ್ಲಿಕಾರ್ಜುನ ಖರ್ಗೆ

0

ನವದೆಹಲಿ(Newdelhi): ನಾನು ಅಪೇಕ್ಷೆ ಪಟ್ಟು ನಿಂತಿರುವ ಚುನಾವಣೆ ಅಲ್ಲ. ನಮ್ಮ ನಾಯಕರು ಒತ್ತಾಯ ಮಾಡಿದ ಮೇಲೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಇದು ವೈಯಕ್ತಿಕ ಹೋರಾಟ ಅಲ್ಲ ಎಂದು ಎಐಸಿಸಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷನಾಗಿದ್ದ ವೇಳೆಯೂ ಇದನ್ನೇ ಹೇಳಿದ್ದೆ. ಕೆಲವರು ನಾನು ಅಂತ ಹೇಳುತ್ತಾರೆ. ಅದರ ಬದಲು ನಾವು ಎಂದರೆ ಪಕ್ಷಕ್ಕೆ ಒಳ್ಳೆಯದು.  ನಾನು ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಟ್ಟಿದ್ದೇನೆ. ನನ್ನೊಬ್ಬನ ಕೈಯಿಂದ ಎಲ್ಲವೂ ಸಾಧ್ಯವಿಲ್ಲ ಎಂದರು.

ರಾಜಸ್ಥಾನದ ಉದಯಪುರದಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಜಾರಿ ಮಾಡುವುದಕ್ಕೆ ಮೊದಲ ಆದ್ಯತೆ ನೀಡುತ್ತೇನೆ ಎಂದರು.

ಅಭ್ಯರ್ಥಿಯಾಗಿ ಹತ್ತು ರಾಜ್ಯಗಳಲ್ಲಿ ಪ್ರವಾಸ ಮಾಡಿ ಮತ ಕೇಳಿದ್ದೇನೆ. ಇನ್ನು ಒಂದಷ್ಟು ರಾಜ್ಯಗಳು ಬಾಕಿ ಇವೆ. ರಾಜ್ಯದ ಹಲವು ನಾಯಕರಿಗೆ ಕರೆ ಮಾಡಿ ಮಾತನಾಡಿದ್ದೇನೆ ಎಂದರು.

ಕಾಂಗ್ರೆಸ್‌ ಪಕ್ಷಕ್ಕಾಗಿ ಗಾಂಧಿ ಪರಿವಾರ ತ್ಯಾಗ ಮಾಡಿದೆ. ಸೋನಿಯಾ ಗಾಂಧಿ ಕೂಡಾ ಸಾಕಷ್ಟು ಹೋರಾಟ ಮಾಡಿದ್ದಾರೆ. ಬಿಜೆಪಿಯು ನಮ್ಮ ಸರ್ಕಾರಗಳನ್ನು ಉರುಳಿಸುವ ಪ್ರಯತ್ನ ಮಾಡಿದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಗಾಂಧಿ ಕುಟುಂಬದ ಸಲಹೆ, ಮಾರ್ಗದರ್ಶನ ಪಡೆಯುತ್ತೇನೆ. ಇದರಲ್ಲಿ ನಾಚಿಕೆ ಪಡುವಂತಹುದು ಏನಿದೆ. ತಪ್ಪುಗಳಿದ್ದರೆ ತಿದ್ದಿಕೊಳ್ಳುತ್ತೇನೆ ಎಂದರು.

ಗಾಂಧಿ ಪರಿವಾರ ಬಿಟ್ಟು ರಾಜಕೀಯ ಮಾಡಲು ಸಾಧ್ಯವಿಲ್ಲ. ಗಾಂಧಿ ಕುಟುಂಬ ಪವರ್ ಸೆಂಟರ್ ಅಲ್ಲ, ಅವರ ಅನುಭವವನ್ನು ಪಡೆಯುವುದರಲ್ಲಿ ತಪ್ಪಿಲ್ಲ ಎಂದು ಅವರು ಹೇಳಿದರು.

ಪಕ್ಷದ ಜಿ 23 ನಾಯಕರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ನಮ್ಮದು ಪ್ರಧಾನಿ ನರೇಂದ್ರ ಮೋದಿ–ಗೃಹ ಸಚಿವ ಅಮಿತ್‌ ಶಾ ತತ್ವದ ವಿರುದ್ಧ ಹೋರಾಟ. ಶಾಸಕರ ಖರೀದಿ, ಹಿಂಬಾಗಿಲ‌ ಮೂಲಕ ಸರ್ಕಾರ ರಚನೆಯ ವಿರುದ್ಧ ನಾವು ಹೋರಾಟ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.