ಮನೆ ಕಾನೂನು ವಾಹನ ನೀತಿ 2.0 ಶೀಘ್ರಗತಿಯಲ್ಲಿ ಜಾರಿಗೊಳಿಸಿ: ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ

ವಾಹನ ನೀತಿ 2.0 ಶೀಘ್ರಗತಿಯಲ್ಲಿ ಜಾರಿಗೊಳಿಸಿ: ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ

0

ಬೆಂಗಳೂರು: ಬೆಂಗಳೂರಿನಲ್ಲಿ ವಾಹನ ನಿಲುಗಡೆ ನೀತಿ 2.0 ಅನ್ನು ಪರಿಣಾಮಕಾರಿಯಾಗಿ ಸಾಧ್ಯವಾದಷ್ಟು ಬೇಗ ಜಾರಿಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

Join Our Whatsapp Group

ವಸತಿ ಪ್ರದೇಶದಲ್ಲಿಅಕ್ರಮವಾಗಿ ವಾಹನ ನಿಲುಗಡೆ ಮಾಡುತ್ತಿರುವುದನ್ನು ಪ್ರಶ್ನಿಸಿ ಬೆಂಗಳೂರಿನ ಎಚ್‌ಎಸ್‌ಆರ್‌ ಬಡಾವಣೆಯ ನಾಗಭೂಷಣರೆಡ್ಡಿ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜು ಅವರ ಏಕಸದಸ್ಯ ಪೀಠವು ಭಾಗಶಃ ಪುರಸ್ಕರಿಸಿದೆ.

ಪಾರ್ಕಿಂಗ್‌ ನೀತಿಯನ್ನು ಹೇಗೆ ಅನುಷ್ಠಾನಗೊಳಿಸಲಾಗುವುದು ಎಂಬ ವಿಧಾನದ ಬಗ್ಗೆ ವಿಸ್ತೃತವಾದ ಯೋಜನಾ ವರದಿಯನ್ನು ಜೂನ್‌ 20ರೊಳಗೆ ಬಿಬಿಎಂಪಿ ಆಯುಕ್ತರು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾಯಾಲಯವು ನಿರ್ದೇಶಿಸಿದೆ.

2020ರ ಡಿಸೆಂಬರ್‌ 2ರಿಂದಲೂ ಪಾರ್ಕಿಂಗ್‌ ನೀತಿ ಚಾಲ್ತಿಯಲ್ಲಿದೆ. ಅದರಂತೆ ಬಿಬಿಎಂಪಿ ವಾಹನ ನಿಲುಗಡೆ ಪ್ರದೇಶ, ವಾಹನ ನಿಲುಗಡೆ ಶುಲ್ಕ, ಬೀದಿ ಬದಿ ಪಾರ್ಕಿಂಗ್‌ ವ್ಯವಸ್ಥೆ ಉತ್ತಮಗೊಳಿಸುವುದು, ಪೈಲಟ್‌ ಪರ್ಮಿಟ್‌ ವ್ಯವಸ್ಥೆ ಆರಂಭಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಆದರೆ, ಈ ಕೆಲಸವನ್ನು ಬಿಬಿಎಂಪಿ ಮಾಡಿಲ್ಲ. ಬಿಬಿಎಂಪಿ ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯದ ನಿಷ್ಕ್ರಿಯತೆಯಿಂದಾಗಿ ಸಾರ್ವಜನಿಕರು ಅನಗತ್ಯ ತೊಂದರೆ ಎದುರಿಸುವಂತಾಗಿದೆ. ಪ್ರಕರಣದಲ್ಲಿ ಅರ್ಜಿದಾರರೂ ಸಹ ಅಂತಹ ಸಮಸ್ಯೆ ಎದುರಿಸುತ್ತಿದ್ದು, ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಆದೇಶಿಸಿದೆ.

ಬಿಲ್ಡಿಂಗ್‌ ಬೈಲಾ ಪ್ರಕಾರ ನಿರ್ಮಾಣವಾಗುವ ಪ್ರತಿಯೊಂದು ವಸತಿ ಸಮುಚ್ಛಯದಲ್ಲೂ ಪಾರ್ಕಿಂಗ್‌ ಜಾಗ ಒದಗಿಸಬೇಕಾಗುತ್ತದೆ. ಬೆಂಗಳೂರಿನ ವಸತಿ ಪ್ರದೇಶ ಹಾಗೂ ವಾಣಿಜ್ಯ ಪ್ರದೇಶದಲ್ಲಿ ಪಾರ್ಕಿಂಗ್‌ ಸಮಸ್ಯೆ ಮಾಮೂಲಾಗಿದೆ. ಅದೇ ಕಾರಣಕ್ಕೆ ಕೆಲವು ಖಾಲಿ ಇರುವ ನಿವೇಶನದಾರರು ಪಾರ್ಕಿಂಗ್‌ಗೆ ಅವಕಾಶ ನೀಡುವ ವಿನೂತನ ಐಡಿಯಾ ಮಾಡಿಕೊಂಡು ಅದರಿಂದ ಹಣ ಮಾಡುತ್ತಿದ್ದಾರೆ. ಇಂತಹ ಕ್ರಮಗಳಿಗೆ ಬಿಬಿಎಂಪಿ ಕಡಿವಾಣ ಹಾಕಬೇಕು” ಎಂದ ನ್ಯಾಯಾಲಯ ಹೇಳಿದೆ.

ಅರ್ಜಿದಾರರ ಪರ ವಕೀಲ ಕೆ ಭರತ್‌ ಅವರು “ಎಚ್‌ಎಸ್‌ಆರ್‌ ಬಡಾವಣೆಯ 19ನೇ ಎ ಮುಖ್ಯರಸ್ತೆಯಲ್ಲಿ 20 ಪ್ಲಾಟ್‌ಗಳಿದ್ದು, ಅಲ್ಲಿ ಅವುಗಳ ಮಾಲೀಕರು ವಾಸಿಸುತ್ತಿದ್ದಾರೆ. ಅದೇ ರಸ್ತೆಯಲ್ಲಿ ನಾಲ್ಕು ನಿವೇಶನಗಳು ಖಾಲಿ ಇವೆ. ನಾಗೇಂದ್ರ ಎಂಬುವರಿಗೆ ಸೇರಿದ ಪ್ಲಾಟ್‌ ನಂಬರ್‌ 4 ಅನ್ನು ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ನಿಲುಗಡೆ ಉದ್ದೇಶಕ್ಕೆ ಗುತ್ತಿಗೆ ನೀಡಲಾಗಿದೆ. ಆ ರೀತಿ ವಸತಿ ಪ್ರದೇಶದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ನೀಡಿರುವುದರಿಂದ ಶಬ್ದ ಹಾಗೂ ವಾಯು ಮಾಲಿನ್ಯ ಹೆಚ್ಚಾಗುವ ಜತೆಗೆ ಆ ರಸ್ತೆಯಲ್ಲಿ ವಾಹನಗಳ ನಿಲುಗಡೆ ಸಮಸ್ಯೆಯೂ ಎದುರಾಗಿದೆ. ಅಲ್ಲಿ ನಿಲ್ಲಿಸುವ ವಾಹನಗಳು ಕೆಲವೊಮ್ಮೆ ಹಗಲು ರಾತ್ರಿ ಅಲ್ಲೇ ಇರುತ್ತವೆ. ಇದರಿಂದ ಸುತ್ತಮುತ್ತಲ ವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ವಿವರಿಸಿದ್ದರು.

ಈ ರೀತಿ ವಸತಿ ಪ್ರದೇಶದ ನಿವೇಶನವನ್ನು ವಾಹನ ನಿಲುಗಡೆ ಉದ್ದೇಶಕ್ಕೆ ಬಳಸಲು ನಿಯಮದಲ್ಲಿಅವಕಾಶವಿಲ್ಲ. ಈ ರೀತಿ ಮೂರನೇ ವ್ಯಕ್ತಿಗೆ ಗುತ್ತಿಗೆ ನೀಡಲೂ ಸಹ ಅವಕಾಶವಿಲ್ಲ. ಹೀಗಾಗಿ, ಅಕ್ರಮ ಪಾರ್ಕಿಂಗ್‌ ನಿಲುಗಡೆ ಪ್ಲಾಟ್‌ ಬಗ್ಗೆ ಕ್ರಮ ಕೈಗೊಳ್ಳುವಂತೆ 2023ರ ಜುಲೈ 27ರಂದೇ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸಹ ಏನೂ ಪ್ರಯೋಜನವಾಗಿಲ್ಲ ಎಂದರು.

ಪ್ರತಿವಾದಿಗಳ ಪರ ವಕೀಲರಾದ ಎಂ ಸುಮನಾ ಬಾಳಿಗಾ, ಸರಿತಾ ಕುಲಕರ್ಣಿ ಮತ್ತು ಎಂ ಆರ್‌ ಮಮತಾ ಅವರು ಪ್ರತಿವಾದಿಗಳಿಗೆ ವಸತಿ ಪ್ರದೇಶದ ನಿವೇಶನವನ್ನು ವಾಹನ ನಿಲುಗಡೆ ಉದ್ದೇಶಕ್ಕೆ ಬಳಕೆ ಮಾಡಲು ಬಿಬಿಎಂಪಿ ಯಾವುದೇ ಅನುಮತಿ ನೀಡಿಲ್ಲ. ನಗರ ಭೂ ಸಾರಿಗೆ ನಿರ್ದೇಶನಾಲಯ ಪಾರ್ಕಿಂಗ್‌ ನೀತಿ 2.0 ಅನ್ನು 2020ರ ಡಿಸೆಂಬರ್‌ ನಲ್ಲಿ ಜಾರಿಗೊಳಿಸಿದ್ದು, ಅದರಂತೆ ವಾಹನ ನಿಲುಗಡೆ ಪ್ರದೇಶ ಗುರುತಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

ಹಿಂದಿನ ಲೇಖನಕೊಪ್ಪಳ: ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ ಹುಲಗಿ ಕಟ್ಟೆಯ ಶಾಸನ ಪತ್ತೆ
ಮುಂದಿನ ಲೇಖನತಮಿಳುನಾಡಿಗೆ 2.5 ಟಿಎಂಸಿ ನೀರು ಹರಿಸಲು ಆದೇಶ: ಮೇ 25 ರಂದು ದೊಡ್ಡಗಡಿಯಾರದ ಮುಂಭಾಗ ಧರಣಿ- ಎಸ್ ಜಯಪ್ರಕಾಶ್