ಕಲಬುರಗಿ: ಸಂವಿಧಾನದ ಕಲಂ 371 ( ಜೆ ) ಜಾರಿಗೆ ಬಂದ ನಂತರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಅಭಿವೃದ್ದಿಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ ಯಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕಲಂ 371 ( ಜೆ ) ಜಾರಿಗೆ ಬಂದ ಮೇಲೆ ಲಕ್ಷಾಂತರ ಜನ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಕ್ಕಿವೆ. ಕಲಬುರಗಿ ಮೆಡಿಕಲ್ ಹಬ್ ಆಗಿ ಅಭಿವೃದ್ದಿ ಹೊಂದಿದೆ. ಇತ್ತೀಚಿಗೆ ಬೆಳಗಾವಿಯ ಅಧಿವೇಶನದಲ್ಲಿ ಕೆಲ ಮಿತ್ರರು ಈ ಬಗ್ಗೆ ಪ್ರಸ್ತಾಪ ಮಾಡಿ ನಕರಾತ್ಮಕ ಮಾತುಗಳನ್ನಾಡಿದ್ದರು. ಕೆಲ ಲೋಪಗಳನ್ನು ಸರಿಪಡಿಸಿಕೊಂಡು, ಈ ಭಾಗದ ಜನರಿಗೆ ಲಾಭ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಜಯದೇವ ಆಸ್ಪತ್ರೆಯಿಂದ 15 ಲಕ್ಷ ಮಂದಿಗೆ ಚಿಕಿತ್ಸೆ
” 2016 ರಲ್ಲಿ ಜಯದೇವ ಆಸ್ಪತ್ರೆ ಸ್ಥಾಪನೆಯಾದ ನಂತರ ಇಲ್ಲಿಯವರೆಗೆ ಸುಮಾರು 15 ಲಕ್ಷ ಜನರು ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಆರೋಗ್ಯ ಸೇವೆ ಪಡೆದುಕೊಂಡಿದ್ದಾರೆ. ಇದು ಹೆಮ್ಮೆಯ ವಿಷಯ. ಕಲಂ 371 (ಜೆ) ಜಾರಿಗೆ ಬಂದು ಒಂದು ದಶಕಗಳು ಸಂದ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆಗೆ ಹೊಸ ಕಟ್ಟಡ ನಿರ್ಮಾಣ ಮಾಡಿ, 371 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಅದು ಸಿಎಂ ಅವರಿಂದ ಲೋಕಾರ್ಪಣೆಗೊಳ್ಳಲಿದೆ.” ಎಂದು ಸಚಿವರು ಹೇಳಿದರು.
ಬಾಣಂತಿಯರ ಸಾವುಗಳು ಸರ್ಕಾರದ ಪ್ರಾಯೋಜಿತ ಕೊಲೆಗಳು ಎನ್ನುವ ವಿರೋಧ ಪಕ್ಷದ ನಾಯಕ ಆರ್ ಅಶೋಕ ಹಾಗೂ ಬಿಜೆಪಿ ನಾಯಕ ಅಶ್ವಥ್ ನಾರಾಯಣ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಕೋವಿಡ್ ಸಂದರ್ಭದಲ್ಲಿ ಅಂದಿನ ಬಿಜೆಪಿ ಸರ್ಕಾರದ ಬೇಜಾವಾಬ್ದಾರಿತನ ಹಾಗೂ ದುಡ್ಡು ಗಳಿಸುವ ದುರಾಸೆಯ ಪರಿಣಾಮ ರಾಜ್ಯದಲ್ಲಿ ಜನರು ಪ್ರಾಣ ಕಳೆದುಕೊಂಡರು. ಅದನ್ನು ಸರ್ಕಾರದ ಪ್ರಾಯೋಜಿತ ಕೊಲೆಗಳು ಎನ್ನಬಹುದು ಎಂದು ತಿರುಗೇಟು ನೀಡಿದರು.
ಬಿಜೆಪಿಯಿಂದ ಮಹಿಳೆಯರ ಅವಹೇಳನ
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕುರಿತು ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿಕೆ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ, ಹೆಬ್ಬಾಳಕರ ಬಗ್ಗೆ ರವಿ ನೀಡಿರುವ ಹೇಳಿಕೆಯನ್ನು ಸ್ವಃತ ಅವರ ಹೆಂಡತಿಯೂ ಒಪ್ಪುವುದಿಲ್ಲ. ಮಹಿಳೆಯರ ಬಗ್ಗೆ ಬಿಜೆಪಿಯವರು ಅವಹೇಳನಕಾರಿ ಮಾತನಾಡುತ್ತಾರೆ. ಅದು ಅವರ ಸಂಸ್ಕೃತಿ. ಆದರೂ ಕೂಡಾ ಅವರ ಪ್ರಕಾರ, ಮುನಿರತ್ನ,ಯಡಿಯೂರಪ್ಪ ಹಾಗೂ ರವಿ ಯಾವುದೇ ತಪ್ಪು ಮಾಡಿಲ್ಲ ಎಂದು ವ್ಯಂಗ್ಯವಾಡಿದರು.
ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಹೇಳಿಕೆ ನೀಡಿದವರಿಗೆ ಶಿಕ್ಷೆ ನೀಡಿಲ್ಲ ಎಂದು ಬಿಜೆಪಿ ನಾಯಕರು ಹೇಳಿರುವ ಕುರಿತು ಪ್ರಶ್ನೆ ಮಾಡಿದಾಗ ಉತ್ತರಿಸಿದ ಸಚಿವರು ಪಾಕಿಸ್ತಾನದ ಪರ ಘೋಷಣೆ ಮಾಡಿದವರೊಂದಿಗೆ ಸಚಿವರಾಗಿದ್ದವರು ಈಗ ಶಾಸಕರಾಗಿರುವವರು ಹೋಲಿಸಿಕೊಳ್ಳುತ್ತಾರೆಯೇ? ಅವರಿಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.
ಕಲಬುರಗಿಯಲ್ಲಿ ನಡೆದ ಕ್ಯಾಬಿನೆಟ್ ನ ನಿರ್ಣಯಗಳ ನ್ನು ಮುಂದಿನ ವರ್ಷದಿಂದಲೇ ಅನುಷ್ಠಾನ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.














