ಬೆಂಗಳೂರು : ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯ ಕೆರೆಗಳಲ್ಲಿ ಫ್ಲೋಟಿಂಗ್ ಸೋಲಾರ್ ಅಳವಡಿಸುವ ನಿಟ್ಟಿನಲ್ಲಿ ಪೂರ್ವ ಕಾರ್ಯಸಾಧ್ಯತಾ ವರದಿ (ಪ್ರಿ ಫೀಸಿಬಲಿಟಿ ರಿಪೋರ್ಟ್) ಸಲ್ಲಿಕೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಣ್ಣ ನೀರಾವರಿ ಕೆರೆಗಳ ವ್ಯಾಪ್ತಿಯಲ್ಲಿನ ಕೆರೆಗಳ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಕೆಯ ಮೂಲಕ ವಿದ್ಯುತ್ ಉತ್ಪಾದನೆ ಮಾಡುವ ನಿಟ್ಟಿನಲ್ಲಿ, ಫ್ಲೋಟಿಂಗ್ ಸೋಲಾರ್ ಅಳವಡಿಕೆಯಲ್ಲಿ ಕಾರ್ಯನಿರತರಾಗಿರುವ ಸಂಸ್ಥೆಗಳ ಜೊತೆ ಸಭೆಯನ್ನು ಆಯೋಜಿಸುವಂತೆ ಕೆಆರ್‌ಇಡಿಎಲ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಈ ಸೂಚನೆಯ ಹಿನ್ನಲೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ, ಫ್ಲೋಟಿಂಗ್ ಸೋಲಾರ್ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿರುವ ಬಿಹೆಚ್‌ಇಎಲ್, ಸನ್‌ಗ್ರೋ, ಆರುಷಿ ಗ್ರೀನ್ ಎನರ್ಜಿ, ಸಿಲ್ & ಟ್ರೆರೆ ಸಂಸ್ಥೆಯ ಪದಾಧಿಕಾರಿಗಳಿಂದ ಯೋಜನೆಯ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಲಾಯಿತು.
ದೇಶದ ವಿವಿಧ ಭಾಗಗಳಲ್ಲಿ ಅಳವಡಿಸಿರುವ ಸೋಲಾರ್ ಪ್ಯಾನೆಲ್ ಬಗ್ಗೆ ಮಾಹಿತಿ ಸಂಗ್ರಹ:
ದೇಶದ ವಿವಿಧ ಭಾಗಗಳಲ್ಲಿ ಸುಮಾರು 200 ಮೆಗಾವ್ಯಾಟ್ ಗೂ ಹೆಚ್ಚು ವಿದ್ಯುತ್ ಫ್ಲೋಟಿಂಗ್ ಸೋಲಾರ್ ಯೋಜನೆಯ ಮೂಲಕ ಉತ್ಪಾದಿಸಲಾಗುತ್ತಿದೆ. ಇದರಿಂದ ಆಗುವ ಅನುಕೂಲಗಳು ಹಾಗೂ ವೆಚ್ಚದ ಬಗ್ಗೆ ಸಮಗ್ರ ಮಾಹಿತಿಯನ್ನು ಸಚಿವರು ಪಡೆದುಕೊಂಡರು. ಬಿಹೆಚ್‌ಇಎಲ್ ಸಂಸ್ಥೆ ಈ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದು ತಾವು ಈಗಾಗಲೇ ಪೂರ್ಣಗೊಳಿಸಿರುವ ಯೋಜನೆಗಳ ಸಮಗ್ರ ಮಾಹಿತಿ ನೀಡಿದರು. ಇದರೆ ಸಂಸ್ಥೆಗಳ ಪದಾಧಿಕಾರಿಗಳು ಫ್ಲೋಟಿಂಗ್ ಸೋಲಾರ್ ಪ್ಯಾನೆಲ್ ಕ್ಷೇತ್ರದಲ್ಲಿನ ಹೊಸ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಿ ಫಿಸಿಬಲಿಟಿ ವರದಿ ಪಡೆದುಕೊಳ್ಳಲು ಸೂಚನೆ:
ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿರುವ 100 ಏಕರೆಗೂ ಕ್ಕೂ ಹೆಚ್ಚು ವ್ಯಾಪ್ತಿಯನ್ನು ಹೊಂದಿರುವ 40 ಕೆರೆಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಫ್ಲೋಟಿಂಗ್ ಸೋಲಾರ್ ಅಳವಡಿಕೆಯ ಮೂಲಕ ಸುಮಾರು 2500 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದಾಗಿದೆ. ಇಂದು ಸಭೆಯಲ್ಲಿ ಸಂಗ್ರಹಿಸಲಾದ ಮಾಹಿತಿಯ ಆಧಾರದ ಮೇಲೆ, ಕೆರೆಗಳಲ್ಲಿ ಫ್ಲೋಟಿಂಗ್ ಸೋಲಾರ್ ಪ್ಯಾನೆಲ್ ಅಳವಡಿಸುವ ನಿಟ್ಟಿನಲ್ಲಿ ಪೂರ್ವ ಕಾರ್ಯಸಾಧ್ಯತಾ ವರದಿ (ಪ್ರಿ ಫಿಸಿಬಲಿಟಿ) ತಯಾರು ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವರದಿಯಲ್ಲಿ ಯೋಜನೆ ಅಳವಡಿಕೆಯಿಂದ ಆಗುವ ಪ್ರಯೋಜನಗಳು, ವಿದ್ಯುತ್ ಉತ್ಪಾದನೆ, ಕೆರೆಯ ಪರಿಸರದ ಮೇಲೆ ಆಗುವ ಪರಿಣಾಮ ಹೀಗೆ ಎಲ್ಲಾ ಕೋನಗಳ ಮಾಹಿತಿಯನ್ನು ಪಡೆದುಕೊಳ್ಳಲು ಸೂಚನೆ ನೀಡಿದರು.
ಈ ವರದಿ ಸಲ್ಲಿಕೆಯ ನಂತರ ಮುಂದಿನ ಕ್ರಮಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಯ ಕಾರ್ಯದರ್ಶಿಗಳಾದ ರಾಘವನ್, ಕೆಆರ್‌ಇಡಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ರುದ್ರಪ್ಪಯ್ಯ, ಸಣ್ಣ ನೀರಾವರಿ ಇಲಾಖೆಯ ಮುಖ್ಯ ಇಂಜಿನೀಯರ್ ಶ್ರೀಹರಿ, ಬಿಹೆಚ್‌ಇಎಲ್ ಸಂಸ್ಥೆಯ ಸೋಲಾರ್ ವಿಭಾಗದ ಅಧಿಕಾರಿಗಳು, ಸನ್‌ಗ್ರೋ, ಆರುಷಿ ಗ್ರೀನ್ ಎನರ್ಜಿ, ಸಿಲ್ & ಟ್ರೆರೆ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.