ಮನೆ ಆರೋಗ್ಯ ದೀಪಾವಳಿ ಹಬ್ಬದಲ್ಲಿ ಅಭ್ಯಂಗ ಸ್ನಾನದ ಮಹತ್ವ

ದೀಪಾವಳಿ ಹಬ್ಬದಲ್ಲಿ ಅಭ್ಯಂಗ ಸ್ನಾನದ ಮಹತ್ವ

0

ದೀಪಾವಳಿ ಬೆಳಕಿನ ಹಬ್ಬ. ಮನೆ ಮನೆಯಲ್ಲೂ ಬೆಳಗಿನ ಕಲರವ ಇರುತ್ತದೆ. ಪ್ರತಿಯೊಬ್ಬರ ಮನಸ್ಸು ಕೂಡ ಹೊಳಪಿನ ಬಂಗಾರದಂತೆ ಹಬ್ಬದ ಆಚರಣೆಯಲ್ಲಿ ಹುರುಪಿನಿಂದ ತೊಡಗಿರುತ್ತದೆ. ಆದರೆ ಪ್ರತಿಯೊಂದು ಹಬ್ಬಕ್ಕೂ ಕೂಡ ನಮ್ಮ ಹಿಂದೂ ಸಂಪ್ರದಾಯದಲ್ಲಿ ಅದರದೇ ಆದ ವೈಶಿಷ್ಟ್ಯವಿದೆ.

ಸಾಂಪ್ರದಾಯಿಕ ಪದ್ಧತಿಯಲ್ಲಿ ಪ್ರತಿಯೊಂದು ಹಬ್ಬವನ್ನು ಸಹ ಆಚರಣೆ ಮಾಡುತ್ತಾರೆ. ಅದೇ ರೀತಿ ನರಕ ಚತುರ್ದಶಿ ಮತ್ತು ದೀಪಾವಳಿ ಹಬ್ಬ ಕೂಡ. ಈ ಸಂದರ್ಭದಲ್ಲಿ ಎಲ್ಲರೂ ಬೆಳಗ್ಗೆ ಎದ್ದ ತಕ್ಷಣ ಮಾಡಬೇಕಾದ ಒಂದು ಕರ್ತವ್ಯ ಎಂದರೆ ಅದು ಅಭ್ಯಂಗ ಸ್ನಾನ.

ಅಭ್ಯಂಗ ಸ್ನಾನದ ಆರೋಗ್ಯ ಪ್ರಯೋಜನಗಳು

• ನರಕ ಚತುರ್ದಶಿ ಹಬ್ಬದ ಪ್ರಾತಃ ಕಾಲದಲ್ಲಿ ಮಾಡುವ ಅಭ್ಯಂಗಸ್ನಾನ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಹಬ್ಬದ ಸಂದರ್ಭದಲ್ಲಿ ಇಡೀ ಮೈಯಿಗೆ ಎಳ್ಳೆಣ್ಣೆ ಹಚ್ಚಿ ಮಸಾಜ್ ಮಾಡಿ ಸ್ನಾನ ಮಾಡಲಾಗುತ್ತದೆ.

• ಎಳ್ಳೆಣ್ಣೆ ಏಕೆಂದರೆ ಈಗ ಚಳಿಗಾಲ ಆಗಿರುವುದರಿಂದ ಇದು ದೇಹಕ್ಕೆ ಉಷ್ಣ ಪ್ರಭಾವವನ್ನು ಉಂಟು ಮಾಡುತ್ತದೆ. ಇದರಿಂದ ದೇಹದಲ್ಲಿ ಪಿತ್ತ ಪ್ರಭಾವ ಸಹ ಕಡಿಮೆ ಆಗುತ್ತದೆ. ಆದರೆ ಇದನ್ನು ಯಾವಾಗಲೂ ಬಳಸಬಾರದು. ಇದರಿಂದ ದೇಹದಲ್ಲಿ ಅತಿಯಾದ ತಾಪಮಾನ ಉಂಟಾಗುತ್ತದೆ.

ಪ್ರತಿನಿತ್ಯ ಅಭ್ಯಂಗ ಸ್ನಾನ ಮಾಡುವುದರಿಂದ ಇಷ್ಟೆಲ್ಲಾ ಪ್ರಯೋಜನ ಸಿಗಲಿದೆ

ಎಳ್ಳೆಣ್ಣೆ ಪ್ರಯೋಜನಗಳು

ಎಳ್ಳೆಣ್ಣೆ ಹಚ್ಚುವುದರಿಂದ ತ್ವಚೆ ಮಾಯಿಶ್ಚರೈಸಿಂಗ್ ಆಗುತ್ತದೆ ಮತ್ತು ಚರ್ಮದ ಸಣ್ಣ ಸಣ್ಣ ರಂದ್ರಗಳು ಮಾಲಿನ್ಯಕಾರಕ ಅಂಶಗಳಿಂದ ಸ್ವಚ್ಛವಾಗುತ್ತವೆ. ವಿಷಕಾರಿ ಅಂಶಗಳು, ಚರ್ಮದ ಸತ್ತ ಜೀವಕೋಶಗಳು ಇಲ್ಲವಾಗುತ್ತವೆ. ತ್ವಚೆಗೆ ನೈಸರ್ಗಿಕವಾದ ಹೊಳಪು ನೀಡುವುದು ಮಾತ್ರವಲ್ಲದೆ ಮೃದುವಾದ ಚರ್ಮ ನಿಮ್ಮದಾಗುತ್ತದೆ.

ಎಳ್ಳೆಣ್ಣೆ ಹಚ್ಚಿ ಮಸಾಜ್

ಎಳ್ಳೆಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದ ದೇಹದಲ್ಲಿ ರಕ್ತಸಂಚಾರ ಚೆನ್ನಾಗಿ ನಡೆಯುತ್ತದೆ ಮತ್ತು ಮೆದುಳಿನ ಭಾಗದಲ್ಲಿ ಒತ್ತಡ ಕಡಿಮೆಯಾಗುತ್ತದೆ ಮನಸ್ಸಿಗೆ ಶಾಂತಿ ಸಿಗುತ್ತದೆ ಎಂದು ಹೇಳುತ್ತಾರೆ. ಅಭ್ಯಂಗ ಸ್ನಾನ ಈ ಸಂದರ್ಭದಲ್ಲಿ ನರನಾಡಿಗಳನ್ನು ಶಾಂತಗೊಳಿಸುತ್ತದೆ ಮತ್ತು ನಯವಾಗಿ ಮಸಾಜ್ ಮಾಡುವುದರಿಂದ ಅವುಗಳಿಗೆ ಶಕ್ತಿ ಮತ್ತು ಚೈತನ್ಯ ನೀಡುತ್ತದೆ.

ಅಭ್ಯಂಗಸ್ನಾನ- ಒಂದು ಪದ್ಧತಿ

• ನಮ್ಮ ಹಿರಿಯರು ಹಲವಾರು ಸಂಪ್ರದಾಯಗಳನ್ನು ಆಚರಿಸುತ್ತಾ ಬಂದಿದ್ದಾರೆ. ಇದರಲ್ಲಿ ನರಕ ಚತುರ್ದಶಿ ಕೂಡ ಒಂದು. ಕೆಟ್ಟ ಶಕ್ತಿಯ ವಿರುದ್ಧ ಒಳ್ಳೆಯ ಶಕ್ತಿ ಜಯಸಾಧಿಸಿದ ದಿನದಂದು ನರಕ ಚತುರ್ದಶಿ ಎನ್ನಲಾಗುತ್ತದೆ.

• ಬೆಳಗಿನ ಸಮಯದಲ್ಲಿ ಅಭ್ಯಂಗ ಸ್ನಾನ ಮಾಡುವುದರಿಂದ ನಮ್ಮಲ್ಲಿರುವ ಕೆಟ್ಟ ಶಕ್ತಿ ನಾಶವಾಗಿ ನಮಗೆ ಸಕಾರಾತ್ಮಕತೆ ಬರುತ್ತದೆ ಎನ್ನುವ ಭಾವನೆ ಮೂಲಕವೇ ಸೂರ್ಯ ಹುಟ್ಟುವ ಮುಂಚೆ ಇದನ್ನು ಆಚರಣೆ ಮಾಡಲಾಗುತ್ತದೆ. ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿದ ರೂಪಕ್ಕೆ ಇದನ್ನು ಹೋಲಿಸಲಾಗುತ್ತದೆ.

ಅಭ್ಯಂಗ ಸ್ನಾನ ಮಾಡುವ ವಿಧಾನ

• ಅಭ್ಯಂಗ ಸ್ನಾನ ಮಾಡುವ ನರಕ ಚತುರ್ದಶಿ ದಿನದಂದು ಬೆಳಗಿನ ಸಮಯದಲ್ಲಿ ಬೇಗ ಎದ್ದೇಳಬೇಕು. ಅಂದರೆ ಸೂರ್ಯ ಹುಟ್ಟುವ ಮುಂಚೆ ಎಚ್ಚರ ಮಾಡಿಕೊಳ್ಳಬೇಕು.

• ನೆತ್ತಿಯ ಮೇಲೆ ಕೆಲವು ಹನಿಗಳಷ್ಟು ಎಳ್ಳೆಣ್ಣೆ ಹಚ್ಚಿ ಇಡೀ ದೇಹಕ್ಕೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು.

• ಅರ್ಧಗಂಟೆ ಹಾಗೆ ಇದ್ದು, ದೇಹದ ಚರ್ಮಕ್ಕೆ ಎಣ್ಣೆ ಚೆನ್ನಾಗಿ ಹೀರಿಕೊಳ್ಳುವಂತೆ ಬಿಡಬೇಕು.

• ಆನಂತರ ಸ್ನಾನಕ್ಕೆ ಹೋಗಬೇಕು. ಈ ಸಂದರ್ಭದಲ್ಲಿ ಆಯುರ್ವೇದ ಮಿಶ್ರಣವನ್ನು ಮೈಯಿಗೆ ಹಚ್ಚಿಕೊಂಡು ಇಡೀ ದೇಹಕ್ಕೆ ಚೆನ್ನಾಗಿ ಮಸಾಜ್ ಮಾಡಬೇಕು.

• ಒಂದೆರಡು ನಿಮಿಷ ಹಾಗೆ ಬಿಟ್ಟು ಆನಂತರ ನೀರಿನಲ್ಲಿ ಚೆನ್ನಾಗಿ ಸ್ವಚ್ಛವಾಗಿ ತೊಳೆದು ಕೊಳ್ಳಬೇಕು.

• ಈಗ ನೀವು ಪ್ರತಿದಿನ ಬಳಸುವ ಹಾಗೆ ಸೋಪ್ ಹಾಕಿ ಸ್ನಾನ ಮಾಡಿಕೊಳ್ಳಿ.

ಹಿಂದಿನ ಲೇಖನನ.1 ರಂದು ನಟ ಪುನೀತ್ ರಾಜ್ ಕುಮಾರ್’ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ
ಮುಂದಿನ ಲೇಖನವೈದ್ಯಕೀಯ ಶಿಕ್ಷಣದಲ್ಲಿ ಮೀಸಲಾತಿ: ಮಹಾರಾಷ್ಟ್ರ ಸರ್ಕಾರದ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್