ಬೆಂಗಳೂರು: ವಿದ್ಯಾರ್ಥಿಗಳ ಶಿಕ್ಷಣದ ಹಿತದೃಷ್ಟಿಯಿಂದ, ರಾಜ್ಯ ಸರ್ಕಾರವು 2025–26ನೇ ಶೈಕ್ಷಣಿಕ ಸಾಲಿನಲ್ಲಿ 51,000 ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಿಸಲು ಮಹತ್ವದ ಆದೇಶ ಹೊರಡಿಸಿದೆ.
ಮೇ 29, 2025 ರಂದು ಶಾಲೆಗಳು ಪುನರಾರಂಭವಾಗಲಿರುವ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿ ಹಾಗೂ ಸಮಯಕ್ಕೆ ಸರಿಯಾಗಿ ಆರಂಭವಾಗಲಿ ಎಂಬ ಉದ್ದೇಶ ಈ ತಾತ್ಕಾಲಿಕ ನೇಮಕಾತಿಗೆ ಆದೇಶ ಹೊರಡಿಸಿದೆ.
ಒಟ್ಟು 51,000 ಅತಿಥಿ ಶಿಕ್ಷಕರ ಪೈಕಿ, 40,000 ಹುದ್ದೆಗಳನ್ನು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಹಾಗೂ ಉಳಿದ 11,000 ಹುದ್ದೆಗಳನ್ನು ಸರ್ಕಾರಿ ಪ್ರೌಢ ಶಾಲೆಗಳಿಗೆ ಹಂಚಿಕೆ ಮಾಡಲಾಗಿದೆ. ಈ ನೇಮಕಾತಿಯನ್ನು ನೇರ ವಿಧಾನದಲ್ಲಿ ತಾತ್ಕಾಲಿಕ ಆಧಾರದಲ್ಲಿ ಮಾಡಿ, ನೇರ ನೇಮಕಾತಿ ಮೂಲಕ ಶಿಕ್ಷಕರನ್ನು ಭರ್ತಿ ಮಾಡುವವರೆಗೆ ಅಥವಾ ಶೈಕ್ಷಣಿಕ ವರ್ಷದ ಅಂತ್ಯವರೆಗೆ ಅವರು ಸೇವೆಯಲ್ಲಿ ಮುಂದುವರಿಸಬಹುದು ಎಂಬ ಷರತ್ತುಗಳನ್ನು ಸರ್ಕಾರ ಸೂಚಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಈ ಬಗ್ಗೆ ಮಾತನಾಡುತ್ತಾ, “ವಿದ್ಯಾರ್ಥಿಗಳು ಶಿಕ್ಷಕರ ಕೊರತೆಯಿಂದಾಗಿ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ನಮ್ಮ ಸರ್ಕಾರದ ಪ್ರಧಾನ ಗುರಿ. ಈ ತಾತ್ಕಾಲಿಕ ನೇಮಕಾತಿ ಮೂಲಕ ಶಿಕ್ಷಕರ ಕೊರತೆಯನ್ನು ತ್ವರಿತವಾಗಿ ಪೂರೈಸುವ ಕ್ರಮ ತೆಗೆದುಕೊಳ್ಳಲಾಗಿದೆ. ಹೊಸ ಶೈಕ್ಷಣಿಕ ವರ್ಷ ಆರಂಭವಾದ ದಿನದಿಂದಲೇ ಗುಣಮಟ್ಟದ ಶಿಕ್ಷಣ ಎಲ್ಲ ವಿದ್ಯಾರ್ಥಿಗಳಿಗೆ ಲಭ್ಯವಾಗಬೇಕು ಎಂಬುದು ನಮ್ಮ ಆದ್ಯತೆ” ಎಂದು ತಿಳಿಸಿದ್ದಾರೆ.
ಅತಿಥಿ ಶಿಕ್ಷಕರಿಗೆ ನೀಡಬೇಕಾದ ಗೌರವಧನದ ಪಾವತಿ ಹಾಗೂ ಅವಶ್ಯಕ ಅನುದಾನದ ವ್ಯವಸ್ಥೆಗೂ ಸರ್ಕಾರ ಸೂಚನೆ ನೀಡಿದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಈ ನೇಮಕಾತಿಯ ಪ್ರಕ್ರಿಯೆ ಸುಗಮವಾಗಿ ನಡೆಯಲು ಸಂಬಂಧಿತ ಅಧಿಕಾರಿಗಳು ಅಗತ್ಯವಿರುವ ಪ್ರಸ್ತಾವನೆಗಳನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂಬುದಾಗಿ ಆದೇಶಿಸಲಾಗಿದೆ.
ಈ ತೀರ್ಮಾನದಿಂದಾಗಿ ಶಿಕ್ಷಕರಿಗೆ ಉದ್ಯೋಗಾವಕಾಶ ಸಿಕ್ಕಿರುವುದಲ್ಲದೇ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನಿರಂತರವಾಗಿ ನೀಡಲು ಸಹಕಾರಿಯಾಗಲಿದೆ. ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಶಿಕ್ಷಣದ ಮಟ್ಟವನ್ನು ಕಾಪಾಡುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ.














