ಮನೆ ರಾಜಕೀಯ ಬೇರೆ ರಾಜ್ಯಗಳಲ್ಲಿ ಎಸಿಬಿ ಇಟ್ಟುಕೊಂಡು ಇಲ್ಲಿ ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳ ರೀತಿಯಲ್ಲಿ ‌ಮಾತಾಡುತ್ತಾರೆ : ಸಿದ್ದರಾಮಯ್ಯ

ಬೇರೆ ರಾಜ್ಯಗಳಲ್ಲಿ ಎಸಿಬಿ ಇಟ್ಟುಕೊಂಡು ಇಲ್ಲಿ ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳ ರೀತಿಯಲ್ಲಿ ‌ಮಾತಾಡುತ್ತಾರೆ : ಸಿದ್ದರಾಮಯ್ಯ

0

ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರು ಜವಾಬ್ದಾರಿಯುತ ಮುಖ್ಯಮಂತ್ರಿ ಹುದ್ದೆಯಲ್ಲಿದ್ದುಕೊಂಡು ಸುಳ್ಳು ಹೇಳಿರುವುದು ಖಂಡನೀಯ. ಬೇರೆ ರಾಜ್ಯಗಳಲ್ಲಿ ಎಸಿಬಿ ಇಟ್ಟುಕೊಂಡು ಇಲ್ಲಿ ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳ ರೀತಿಯಲ್ಲಿ ‌ಮಾತಾಡುತ್ತಾರೆ  ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ  ಕಿಡಿಕಾರಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುರುವಾರ ನಾನು ಸದನದಲ್ಲಿ ಇರಲಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್‌ ಚರ್ಚೆಗೆ ಉತ್ತರ ನೀಡಿದ್ದಾರೆ. ಈ ವೇಳೆ ಬೊಮ್ಮಾಯಿ ಬಹಳ ವೀರಾವೇಶದಿಂದ ಮಾತಾಡಿದ್ದಾರೆಮುಖ್ಯಮಂತ್ರಿಗಳಿಗೆ ಸ್ವಲ್ಪನಾದ್ರೂ ಕಾನೂನು ಅರಿವು ಇದೆ ಎಂದು ಭಾವಿಸಿದ್ದೇನೆ ಎಂದರು.

ನಾವು ಲೋಕಾಯುಕ್ತ ಮುಚ್ಚಲೂ ಇಲ್ಲ, ಲೋಕಾಯುಕ್ತರನ್ನು ತೆಗೆದುಹಾಕುವುದಾಗಲೀ ಮಾಡಿಲ್ಲ.  ಗುಜರಾತ್‌, ಗೋವಾ, ಅಸ್ಸಾಂ, ಮಧ್ಯಪ್ರದೇಶಗಳಲ್ಲಿ ಯಾಕಿನ್ನು ಎಸಿಬಿ ಮುಚ್ಚಿಲ್ಲ? ದೇಶದ 16 ರಾಜ್ಯಗಳು ಲೋಕಾಯುಕ್ತದ ಜೊತೆಗೆ ಎಸಿಬಿಯನ್ನು ಹೊಂದಿದೆ. ತಮ್ಮನ್ನು ತಾವು ಚೌಕಿದಾರ್‌ ಎಂದು ಕರೆದುಕೊಳ್ಳುವವರು ಯಾಕೆ ಇನ್ನು ಲೋಕಪಾಲ್‌ ಅನ್ನು ಮಾಡಿಲ್ಲ? ಮೂರು ವರ್ಷಗಳ ಬಿಜೆಪಿ ಸರ್ಕಾರ ಎಸಿಬಿ ಮುಚ್ಚದೆ ಸುಮ್ಮನಿದ್ದದ್ದು ಯಾಕೆ? ಅಡ್ವೋಕೇಟ್‌ ಜನರಲ್‌ ಮೂಲಕ ಎಸಿಬಿ ರಚನೆಯನ್ನು ಸಮರ್ಥನೆ ಮಾಡಿಸಿರುವುದು ಯಾಕೆ? ಕೋರ್ಟಿನಲ್ಲಿ ಹಿಂದಿನ ಸರ್ಕಾರ ತಪ್ಪು ಮಾಡಿದೆ, ಎಸಿಬಿ ರದ್ದು ಮಾಡಿ ಎಂದು ಹೇಳಿಸಬೇಕಿತ್ತು. ಎಸಿಬಿ ಪರವಾಗಿರುವವರು ಬಿಜೆಪಿಯವರೇ. ಬಿಜೆಪಿ ಆಡಳಿತವಿರುವ ಅನೇಕ ರಾಜ್ಯಗಳಲ್ಲಿ ಎಸಿಬಿ ಇಟ್ಟುಕೊಂಡಿದ್ದಾರೆ, ಇಲ್ಲಿ ಮಾತ್ರ ಹರಿಶ್ಚಂದ್ರನ ಮೊಮ್ಮಕ್ಕಳ ಹಾಗೆ ಮಾತನಾಡುತ್ತಾರೆ ಎಂದು ಗುಡುಗಿದರು.

ಅರ್ಕಾವತಿ ರಿಡೂ ಆರೋಪಕ್ಕೆ ಕಿಡಿಕಿಡಿ!

ಅರ್ಕಾವತಿ ಲೇಔಟ್ ಬಗ್ಗೆ ಗುರುವಾರ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ. ನಾನು ಅಧಿಕಾರಕ್ಕೆ ಬರುವ ಮುನ್ನವೇ ಅರ್ಕಾವತಿ ಲೇಔಟ್ ಡಿನೋಟಿಫೈ ಆಗಿತ್ತು. ಇದರ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಕೇಸ್ ದಾಖಲಾಗಿತ್ತು. ನಾವೂ ಅಧಿಕಾರಕ್ಕೆ ಬರುವ ಮುನ್ನವೇ ಇದು ನಡೆದಿತ್ತು. ನಾನು ಸಿಎಂ ಆದ್ಮೇಲೆ ಮತ್ತೆ ಹೈಕೋರ್ಟ್ಗೆ ಹೋಗಿದ್ದರು. ನಾನು ಮಾಡಿದ್ದು ರೀಡೂ ಅಲ್ಲ, ರಿ ಮಾಡಿಫೈ ಸ್ಕೀಮ್ ಎಂದು ಸುಪ್ರೀಂ ಕೋರ್ಟ್ ಮಾನದಂಡ ಮೇಲೆ ನಾನು ಅನುಮೋದನೆ ಮಾಡಿದ್ದೆ ಎಂದರು.

ಇದರ ವಿರುದ್ಧ ಆಗಿನ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಭ್ರಷ್ಟಾಚಾರ ಆರೋಪ ಮಾಡಿದ್ದರು. ಆಗಲೇ ನಾನು ಕೆಂಪಣ್ಣ ಆಯೋಗ ರಚನೆ ಮಾಡಿದ್ದೆ. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದಗೌಡ, ರಾಜ್ಯಪಾಲರ, ಕುಮಾರಸ್ವಾಮಿ ಕಾಲದಲ್ಲಿ ಡಿನೋಟಿಪೈ ಮಾಡಿದ್ದಾರೆ. ಸಿದ್ದರಾಮಯ್ಯ ಅವಧಿಯಲ್ಲಿ ಒಂದೇ ಒಂದು ಎಕರೆ ಡಿನೋಟಿಫೈ ಮಾಡಿಲ್ಲ ಎಂದು ಕೆಂಪಣ್ಣ ವರದಿ ಹೇಳಿದೆ. ನಾಲ್ಕು ವರ್ಷದಲ್ಲಿ ಯಾಕೆ ಈ ವರದಿಯನ್ನು ಮಂಡಿಸಿಲ್ಲ. ಯಾಕೆ ಸುಮ್ಮನೆ ಇದ್ದರು ಎಂದು ಪ್ರಶ್ನಿಸಿದರು.

ನಾವು ಶೇ.40ರಷ್ಟು ಕಮಿಷನ್ ಆರೋಪ ಮಾಡಿದಾಗ ಕೆಂಪಣ್ಣ ವರದಿ ಬಗ್ಗೆ ಮಾತಾಡುತ್ತಾರೆ. ಉಪನ್ಯಾಸ ನೇಮಕಾತಿ, ಬಿಟ್ಕಾಯಿನ್, ಪಿಎಸ್ಐ ಹಗರಣ , ಕೋವಿಡ್ ಕಾಲದ ಹಗರಣಗಳನ್ನು ಮುಚ್ಚಿ ಹಾಕಲು ಮುಂದಾಗಿದ್ದಾರೆ. ಸುಪ್ರೀಂ ಕೋರ್ಟ್ ಜಡ್ಜ್ ನೇತೃತ್ವದಲ್ಲಿ ಒಂದು ಆಯೋಗ ಮಾಡಲಿ. ನಮ್ಮ ಕಾಲದಲ್ಲಿ ಹಾಗೂ ನಿಮ್ಮ ಕಾಲದಲ್ಲಿ ಆಗಿರುವ ಎಲ್ಲಾ ಹಗರಣಗಳ ಬಗ್ಗೆ ತನಿಖೆ ಆಗಲಿ. ನಾನು ನಿನ್ನೆ ಇರಲಿಲ್ಲ, ಇದ್ದಿದ್ದರೆ ಸರಿಯಾಗಿ ಉತ್ತರ ಕೊಡುತ್ತಿದ್ದೆ ಎಂದು ಸಿದ್ದರಾಮಯ್ಯ ಹೇಳಿದರು.

59 ಕೇಸ್ನಲ್ಲಿ ‘ಬಿ’ ರಿಪೋರ್ಟ್ ಹಾಕಿದ್ದಾರೆ ಎಂದು ಹೇಳಿದ್ದಾರೆ. ಅವುಗಳಿಗೆ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಬಾರದು ಎಂಬ ನಿಯಮ ಇದೆಯಾ? ಎಫ್ಐಆರ್ ಆಗಿಲ್ಲ ಅಂದ್ರೇ ನೀವು ಹೋಗಿ ಮೇಲ್ಮನವಿ ಸಲ್ಲಿಸಬಹುದಿತ್ತು. ಸದನದಲ್ಲಿಯೂ ಅದರ ಬಗ್ಗೆ ಚರ್ಚೆ ಮಾಡಿಲ್ಲ. ಸದನದಲ್ಲಿ ಮಂಡಿಸದೇ ವರದಿಯ ಅಂಶಗಳನ್ನು ಹೇಳುವುದು ಸರಿಯಲ್ಲ. ನೀವು ಪ್ರಾಮಾಣಿಕರಾಗಿದ್ದರೇ ತನಿಖೆ ಮಾಡಿಸಿ ಎಂದು ಸವಾಲು ಹಾಕಿದರು.

ವರದಿಯನ್ನು ಸದನದಲ್ಲಿ ಮಂಡಿಸದೆ ಅಂಶಗಳನ್ನು ಹೇಳುವುದು ಅಸೆಂಬ್ಲಿಗೆ ಮಾಡಿದ ಅವಮಾನ. ಇದು ವಿಧಾನಸಭೆಗೆ ಕಪ್ಪು ಚುಕ್ಕೆ, ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ರಿಡೂ ಎಂಬ ಪದವನ್ನು ನಾವು ಬಳಸಿದ ಪದ ಅಲ್ಲ. ಹೈಕೋರ್ಟ್ ನೀಡಿದ ಪದ. ಬೊಮ್ಮಾಯಿಯವರು ಪ್ರಾಮಾಣಿಕರಾಗಿದ್ರೆ ತನಿಖೆಗೆ ಕೊಡಿ. ನಾನು ಎಂಟು ಪ್ರಕರಣಗಳನ್ನ ಸಿಬಿಐಗೆ ಕೊಟ್ಟಿದ್ದೆ, ಇವರು ಒಂದೇ ಒಂದು ಪ್ರಕರಣವನ್ನು ಸಿಬಿಐಗೆ ಕೊಟ್ಟಿಲ್ಲ ಎಂದು ಕಿಡಿಕಾರಿದರು.