ನಾಗಪುರ: ಲೋಕಸಭೆ ಚುನಾವಣೆಯಲ್ಲಿ ಜನರ ತೀರ್ಪಿನಂತೆ ಎಲ್ಲವೂ ನಡೆಯುತ್ತಿದೆ. ಈ ಕುರಿತು ಸಂಘ ಯಾವುದೇ ಚರ್ಚೆ ಮಾಡುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಹೇಳಿದ್ದಾರೆ.
ನಾಗಪುರದ ರೇಶಿಂಭಾಗ್‌ನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲೋಕಸಭೆಯ ಚುನಾವಣೆ ಸಂಪನ್ನವಾಗಿದೆ. ಅದರ ಫಲಿತಾಂಶ ಬಂದಿದ್ದು, ಹೊಸ ಸರಕಾರದ ರಚನೆಯೂ ಆಗಿದೆ. ಚುನಾವಣೆಯ ಎಲ್ಲ ಪ್ರಕ್ರಿಯೆ ಮುಗಿದಿದ್ದರೂ, ಇನ್ನೂ ಅದರ ಕುರಿತು ಏಕೆ, ಹೇಗೆ ಎನ್ನುವ ಚರ್ಚೆಗಳು ನಡೆಯುತ್ತಿದೆ. ಪ್ರಜಾಪ್ರಭುತ್ವದನುಸಾರ ದೇಶದಲ್ಲಿ ಪ್ರತೀ 5 ವರ್ಷಕ್ಕೊಮ್ಮೆ ಚುನಾವಣೆಯ ನಡೆಯುತ್ತದೆ. ಅದು ಸಹಜ ಪ್ರಕ್ರಿಯೆ. ಚುನಾವಣೆಗೆ ಅದರದ್ದೇ ಆದ ನಿಯಮ, ಮಾನದಂಡಗಳಿವೆ. ಜತೆಗೆ ಪ್ರಾಮುಖ್ಯವೂ ಇದೆ. ಅದರಂತೆಯೇ ಚುನಾವಣೆ ನಡೆಯುತ್ತದೆ ಎಂದರು.
ಪ್ರಸ್ತುತ ಚುನಾವಣೆಯಲ್ಲಿ ಜನರು ಮತ ನೀಡಿದ್ದಾರೆ. ಅದರಂತೆ ಎಲ್ಲವೂ ನಡೆಯುತ್ತಿದೆ. ಆದರೆ ಅದು ಏಕೆ, ಹೇಗೆ ಎಂಬುದರ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಚರ್ಚಿಸುವುದಿಲ್ಲ. ಮತ ಚಲಾಯಿ ಸುವುದು ಮಾತ್ರ ನಮ್ಮ ಕರ್ತವ್ಯ, ಅದನ್ನು ಪ್ರತೀ ಬಾರಿ ಮಾಡುತ್ತಲೇ ಬಂದಿದ್ದೇವೆ ಎಂದು ಹೇಳಿದ್ದಾರೆ.