ನವದೆಹಲಿ: ಗುರುವಾರ ನೇಮಕಗೊಂಡಿದ್ದ ಇಬ್ಬರು ನೂತನ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಸುಖ್ಬೀರ್ ಸಿಂಗ್ ಸಂಧು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.
ಇತ್ತೀಚೆಗೆ, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಮತ್ತು ಚುನಾವಣಾ ಆಯುಕ್ತರ ನೇಮಕಾತಿಯ ಹೊಸ ಕಾನೂನು ಜಾರಿಗೆ ಬಂದ ನಂತರ ಚುನಾವಣಾ ಸಮಿತಿಯ ಸದಸ್ಯರಾಗಿ ನೇಮಕಗೊಂಡ ಮೊದಲಿಗರಾಗಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ನೂತನ ಆಯುಕ್ತರನ್ನು ಸ್ವಾಗತಿಸಿದರು. ಚುನಾವಣಾ ಆಯೋಗವು ಲೋಕಸಭೆ ಚುನಾವಣೆ ನಡೆಸಲು ಸಜ್ಜಾಗಿರುವ ಐತಿಹಾಸಿಕ ಘಟ್ಟದಲ್ಲಿ ಅವರ ಸೇರ್ಪಡೆಯ ಮಹತ್ವದ ಕುರಿತು ಸಿಇಸಿ ಮಾತನಾಡಿದರು ಎಂದು ವಕ್ತಾರರು ತಿಳಿಸಿದ್ದಾರೆ.
ಫೆಬ್ರುವರಿ 14ರಂದು ಅನೂಪ್ ಚಂದ್ರ ಪಾಂಡೆ ನಿವೃತ್ತಿ ಮತ್ತು ಮಾರ್ಚ್ 8ರಂದು ಅರುಣ್ ಗೋಯಲ್ ಅವರು ಹಠಾತ್ ರಾಜೀನಾಮೆ ನೀಡಿದ ನಂತರ ಚುನಾವಣಾ ಆಯೋಗದಲ್ಲಿ ಎರಡು ಆಯುಕ್ತರ ಹುದ್ದೆಗಳು ಖಾಲಿಯಾಗಿದ್ದವು.
1988ರ ಬ್ಯಾಚ್‌ನ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಗಳಾದ ಜ್ಞಾನೇಶ್ ಕುಮಾರ್ ಮತ್ತು ಸಂಧು ಕ್ರಮವಾಗಿ ಕೇರಳ ಮತ್ತು ಉತ್ತರಾಖಂಡ ಕೇಡರ್‌ಗೆ ಸೇರಿದವರು.