ಮನೆ ಸುದ್ದಿ ಜಾಲ ಚಾರಣಿಗರ ಸ್ವರ್ಗ ತಡಿಯಂಡಮೋಳ್ ನಲ್ಲಿ ಘಟನೆ: ಟ್ರಕ್ಕಿಂಗ್ ಮಾಡುವಾಗ ಹೃದಯಾಘಾತವಾಗಿ ಹರಿಯಾಣ ಮೂಲದ ಯುವಕನ ಸಾವು

ಚಾರಣಿಗರ ಸ್ವರ್ಗ ತಡಿಯಂಡಮೋಳ್ ನಲ್ಲಿ ಘಟನೆ: ಟ್ರಕ್ಕಿಂಗ್ ಮಾಡುವಾಗ ಹೃದಯಾಘಾತವಾಗಿ ಹರಿಯಾಣ ಮೂಲದ ಯುವಕನ ಸಾವು

0

ಮಡಿಕೇರಿ: ಕೊಡಗಿಗೆ ಭೇಟಿ ನೀಡಿದ್ದ ಯುವಕನಿಗೆ ಟ್ರಕ್ಕಿಂಗ್ ಮಾರಣಾಂತಿಕವಾಗಿ ಪರಿಣಮಿಸಿದ್ದು ಗುಡ್ಡ ಹತ್ತುವಾಗ ಹೃದಯಾಘಾತವಾಗಿ ಮೃತಪಟ್ಟಿದ್ದಾನೆ.

ಮಡಿಕೇರಿ ತಾಲೂಕಿನ ನಾಪೋಕ್ಲು ಬಳಿಯ ಕೊಡಗಿನ ಅತ್ಯುನ್ನತ ಶಿಖರವಾದ ತಡಿಯಂಡಮೋಳ್ ನಲ್ಲಿ ಈ ಘಟನೆ ನಡೆದಿದೆ. ಮೃತನನ್ನು ಹರಿಯಾಣ ಮೂಲದ 23 ವರ್ಷದ ಜತಿನ್ ಎಂದು ಗುರುತಿಸಲಾಗಿದೆ.

ನಿನ್ನೆ ಮೂವರು ಹುಡುಗಿಯರು ಮತ್ತು ಮೂವರು ಹುಡುಗರು ಸೇರಿದಂತೆ ಆರು ಜನರ ತಂಡ ತಡಿಯಾಂಡಮೋಳ್ ಶಿಖರದಲ್ಲಿ ಟ್ರಕ್ಕಿಂಗ್ ಮಾಡಲು ಯೋಜಿಸಿತ್ತು. ಚಾರಣಿಗರು ಬೆಂಗಳೂರಿನ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದು, ರಜೆಯ ಮೇಲೆ ಕೊಡಗಿಗೆ ಆಗಮಿಸಿದ್ದರು.

ಚಾರಣಿಗರು ಗುಡ್ಡದ ತುದಿಗೆ ತಲುಪುತ್ತಿದ್ದಂತೆ ಜತಿನ್‌ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಆತ ಅಲ್ಲೇ ಉಸಿರುಗಟ್ಟಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಈ ವೇಳೆ ಸ್ಥಳದಲ್ಲಿದ್ದ ವೈದ್ಯರು ಜತಿನ್‌ಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಘಟನೆಯ ಬಗ್ಗೆ ನಾಪೋಕ್ಲು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಜತಿನ್ ಅವರ ಮೃತದೇಹವನ್ನು ಮೇಕ್-ಶಿಫ್ಟ್ ಸ್ಟ್ರೆಚರ್‌ನಲ್ಲಿ ಸಾಗಿಸಲಾಯಿತು. ಅರಣ್ಯ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಮೃತದೇಹವನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಸಂತ್ರಸ್ತರ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.