ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಗ್ರಾಮ ಪಂಚಾಯಿತಿ ಸದಸ್ಯರಿಗೆ ಗೌರವಧನ ಹೆಚ್ಚಳ ಮಾಡಬೇಕು ಎಂದು ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕರಾದ ದಿನೇಶ್ ಗೂಳಿಗೌಡ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ನಿಯಮ 330ರ ಅಡಿಯಲ್ಲಿ ಚರ್ಚೆಯಲ್ಲಿ ಭಾಗವಹಿಸಿದ್ದ ಶಾಸಕರಾದ ದಿನೇಶ್ ಗೂಳಿಗೌಡ ಅವರು ಸ್ಥಳೀಯ ಸಂಸ್ಥೆಗಳ ಗ್ರಾಮ ಪಂಚಾಯಿತಿ ಸದಸ್ಯರಿಗೆ ಗೌರವಧನ ಹೆಚ್ಚಳ ಮಾಡಬೇಕು. ಈ ಮೂಲಕ ಗೌರವಯುತ ವೇತನ ಅವರಿಗೆ ಸಿಗುವಂತಾಗಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿ ಬರುವವರು ಆರ್ಥಿಕವಾಗಿ ಸ್ಥಿತಿವಂತರಾಗಿರುವುದಿಲ್ಲ. ರೈತರು, ರೈತ ಮಹಿಳೆಯರು, ಪದವೀಧರರು, ಸ್ನಾತಕೋತ್ತರ ಪದವೀಧರರು, ಇಂಜಿನಿಯರಿಂಗ್ ಪದವೀಧರರು, ಎಂಎಸ್ ಡಬ್ಲ್ಯೂ ಮಾಡಿದಂತವರೂ ಇದ್ದಾರೆ. ಇವರಿಗೆ ನೀಡುತ್ತಿರುವ ಗೌರವಧನ ಬಹಳವೇ ಕಡಿಮೆ ಇದೆ. ಇದನ್ನು ಸರಿಪಡಿಸಬೇಕಿದೆ ಎಂದು ಈ ವೇಳೆ ಶಾಸಕರಾದ ದಿನೇಶ್ ಗೂಳಿಗೌಡ ಅವರು ತಿಳಿಸಿದರು.
ಶಾಸಕರು, ಸಂಸತ್ ಸದಸ್ಯರು ಹಾಗೂ ಸಚಿವರಿಗೆ ಅವರ ಅವಧಿ ಮುಗಿದ ಮೇಲೂ ಪಿಂಚಣಿ ಲಭಿಸುತ್ತದೆ ಆದರೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಯಾವುದೇ ರೀತಿಯ ಪಿಂಚಣಿ ಸಹ ಲಭ್ಯವಿರುವುದಿಲ್ಲ. ಈ ಕಾರಣಕ್ಕಾಗಿ ಗೌರವಧನವನ್ನು ಹೆಚ್ಚಳ ಮಾಡಬೇಕು ಎಂದು ನಾನು ಈ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯ ಮಾಡುತ್ತೇನೆ ಎಂದು ಶಾಸಕರಾದ ದಿನೇಶ್ ಗೂಳಿಗೌಡ ಅವರು ತಿಳಿಸಿದರು.
“ನುಡಿದಂತೆ ನಡೆಯಲು” ಬಿಜೆಪಿಗೆ ಸಲಹೆ
ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನವನ್ನು ಹೆಚ್ಚಳ ಮಾಡುವುದಾಗಿ ಆಡಳಿತದಲ್ಲಿದ್ದ ಬಿಜೆಪಿ ಪಕ್ಷವು ಭರವಸೆಯನ್ನು ನೀಡಿತ್ತು ಇದೀಗ ನಿಮ್ಮದೇ ಸರ್ಕಾರ ಇರುವುದರಿಂದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಗೌರವ ಧನ ಹೆಚ್ಚಳ ಮಾಡುವ ಮೂಲಕ “ನುಡಿದಂತೆ ನಡೆಯಿರಿ” ಎಂದು ನಾನು ಈ ಮೂಲಕ ಒತ್ತಾಯ ಮಾಡುತ್ತೇನೆ ಎಂದು ಶಾಸಕರಾದ ದಿನೇಶ್ ಗೂಳಿಗೌಡ ಅವರು ಸರ್ಕಾರವನ್ನು ಒತ್ತಾಯಿಸಿದರು.
ಅಡಿಷನಲ್ ಬಜೆಟ್ ನಲ್ಲಿ ಘೋಷಿಸಿ – ದಿನೇಶ್ ಗೂಳಿಗೌಡ
ಗ್ರಾಮ ಪಂಚಾಯಿತಿ ಸದಸ್ಯರಿಗೆ ವೇತನ ಹೆಚ್ಚಳ ಮಾಡುವ ಕುರಿತು ಸಭಾನಾಯಕರಿಗೆ ಹಾಗೂ ಸಚಿವರಿಗೆ ಶಕ್ತಿಯನ್ನು ತುಂಬಲು ಸ್ಥಳೀಯ ಸಂಸ್ಥೆಗಳ 25 ಪ್ರತಿನಿಧಿಗಳು ಪಕ್ಷಾತೀತವಾಗಿ ಮುಖ್ಯಮಂತ್ರಿಗಳ ಬಳಿ ನಿಯೋಗ ಹೋಗಲು ನಾವೆಲ್ಲರೂ ಸಿದ್ಧವಿದ್ದೇವೆ. ಹೀಗಾಗಿ ಈ ವರ್ಷದ ಅಡಿಷನಲ್ ಬಜೆಟ್ ನಲ್ಲಿ ಈ ಬಗ್ಗೆ ಘೋಷಣೆಯನ್ನು ಮಾಡಬೇಕೆಂದು ನಾನು ಸರ್ಕಾರವನ್ನು ಒತ್ತಾಯ ಮಾಡುತ್ತೇನೆ ಎಂದು ಶಾಸಕರಾದ ದಿನೇಶ್ ಗೂಳಿಗೌಡ ಅವರು ತಿಳಿಸಿದರು.