ಬೆಂಗಳೂರು : ರಾಜ್ಯದಲ್ಲಿ ಕೋವಿಡ್‌ಗೆ ವ್ಯಕ್ತಿಯೊಬ್ಬರು ಬಲಿಯಾದ ಬೆನ್ನಲ್ಲೇ, ಸೋಂಕಿನ ಲಕ್ಷಣ ಹೊಂದಿರುವವರನ್ನು ಪರೀಕ್ಷೆಗೊಳಪಡಿಸಲು ಸರ್ಕಾರ ಸೂಚಿಸಿದೆ.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಮತ್ತೊಮ್ಮೆ ಹೆಚ್ಚಳಗೊಳ್ಳುತ್ತಿದ್ದು, ಆರೋಗ್ಯ ಇಲಾಖೆ ತುರ್ತು ಕ್ರಮಗಳನ್ನು ಕೈಗೊಂಡಿದೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿನಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಬೆನ್ನಲ್ಲೇ, ಸೋಂಕಿನ ಲಕ್ಷಣಗಳನ್ನು ಹೊಂದಿರುವ ಎಲ್ಲರಿಗೂ ತಕ್ಷಣ ಪರೀಕ್ಷೆ ನಡೆಸುವಂತೆ ಸರ್ಕಾರದಿಂದ ಸೂಚನೆ ಹೊರಡಿಸಲಾಗಿದೆ.
ಪ್ರಸ್ತುತ ರಾಜ್ಯದಲ್ಲಿ ಒಟ್ಟು 47 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಬೆಂಗಳೂರಿನಲ್ಲಿ ಮಾತ್ರ 32 ಪ್ರಕರಣಗಳು ಪತ್ತೆಯಾಗಿವೆ. ಈ ಬೆಳವಣಿಗೆ ಸ್ವಾಭಾವಿಕವಾಗಿ ಜನರಲ್ಲಿ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರನ್ನು ಸೇರಿದಂತೆ ರಾಜ್ಯದ 10 ಪ್ರಮುಖ ಪ್ರದೇಶಗಳಲ್ಲಿ ಕೋವಿಡ್ ಟೆಸ್ಟಿಂಗ್‌ಗಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಆರೋಗ್ಯ ಇಲಾಖೆಯು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ದಿನಕ್ಕೆ 150 ರಿಂದ 200 ಪರೀಕ್ಷೆಗಳನ್ನು ನಡೆಸಲು ಗುರಿ ಇಡಲಾಗಿದೆ. ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳ ಆಧಾರದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಆರೋಗ್ಯ ಇಲಾಖೆಯ ಪ್ರಮುಖ ಸೂಚನೆಗಳು:
- ಎಲ್ಲಾ SARI ಪ್ರಕರಣಗಳಿಗೆ ಕಡ್ಡಾಯ RT-PCR ಪರೀಕ್ಷೆ: ತೀವ್ರ ಉಸಿರಾಟದ ಸೋಂಕುಗಳ ಲಕ್ಷಣವಿರುವ ಎಲ್ಲರಿಗೂ ತಕ್ಷಣ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದೆ.
- ವಲ್ನರೆಬಲ್ (ಸಾಧ್ಯತೆಯ ಹೆಚ್ಚಿನ) ಗುಂಪುಗಳಿಗೆ ತ್ವರಿತ ಪರೀಕ್ಷೆ: ವಯೋವೃದ್ಧರು, ಮಕ್ಕಳು ಮತ್ತು ಗರ್ಭಿಣಿಯರು ಯಾವುದೇ ಸೋಂಕಿನ ಲಕ್ಷಣಗಳನ್ನು ತೋರಿದರೆ, ಕೂಡಲೇ ಪರೀಕ್ಷೆ ಮಾಡಬೇಕೆಂಬ ನಿಬಂಧನೆ ವಿಧಿಸಲಾಗಿದೆ.
- ಮಾದರಿಗಳನ್ನು ಅದೇ ದಿನ ಪ್ರಯೋಗಾಲಯಗಳಿಗೆ ಕಳುಹಿಸುವ ವ್ಯವಸ್ಥೆ: ಕೋವಿಡ್ ಮಾದರಿಗಳನ್ನು ಪರಿಶೀಲನೆಗಾಗಿ ಅನುಬಂಧ-1ರಲ್ಲಿ ನಿಗದಿಪಡಿಸಿದ ಲ್ಯಾಬ್‌ಗಳಿಗೆ ಅದೇ ದಿನದೊಳಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ.
- FIFO ಆಧಾರದ ಮೇಲೆ ಟೆಸ್ಟ್ ಕಿಟ್‌ಗಳ ಬಳಕೆ: ಲಭ್ಯವಿರುವ ಪರೀಕ್ಷಾ ಕಿಟ್‌ಗಳು ವ್ಯರ್ಥವಾಗದಂತೆ, ‘ಫಸ್ಟ್ ಇನ್ ಫಸ್ಟ್ ಔಟ್’ ಮಾದರಿಯಲ್ಲಿ ಬಳಸಲು ಸೂಚಿಸಲಾಗಿದೆ.
ರಾಜ್ಯದಲ್ಲಿ ಮತ್ತೆ ಕೋವಿಡ್ ಹರಡುವಿಕೆಗೆ ತಡೆ ಹಾಕಲು ಸರ್ಕಾರ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಸಹ ಸಹಕಾರ ನೀಡಬೇಕು ಕೋರಲಾಗಿದೆ. ಸೋಂಕಿನ ಆತಂಕವಿಲ್ಲದಿದ್ದರೂ, ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಜನತೆಗೆ ಸಲಹೆ ನೀಡಿರುವ ಆರೋಗ್ಯ ಇಲಾಖೆ, ಜ್ವರ, ಕೆಮ್ಮು, ಉಸಿರಾಟದ ತೊಂದರೆಗಳಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಪರೀಕ್ಷೆಗೊಳಪಡಿಸಬೇಕು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿ, ಸ್ವಚ್ಚತೆಯನ್ನು ಕಾಪಾಡಬೇಕು ಎಂದು ಮನವಿ ಮಾಡಿದೆ.














