ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದೈನಂದಿನ ಕೋವಿಡ್ ಪರೀಕ್ಷೆಗಳ ಗುರಿಯನ್ನು 20 ಸಾವಿರಕ್ಕೆ ಹೆಚ್ಚಿಸಿದ್ದು, ಮನೆ ಹಾಗೂ ಕಚೇರಿಗಳಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕಿತರಿಗೆ ಕಡ್ಡಾಯವಾಗಿ ಪರೀಕ್ಷೆ ನಡೆಸುವಂತೆ ಸೂಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಬಗ್ಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ಎಲ್ಲಾ ಐಎಲ್’ಐ (ಶೀತ ಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ) ಮತ್ತು ಸಾರಿ (ತೀವ್ರ ಉಸಿರಾಟದ ಸಮಸ್ಯೆ) ಪ್ರಕರಣಗಳನ್ನು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಹಾಗೆಯೇ ರೋಗ ಲಕ್ಷಣವುಳ್ಳ ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಬೇಕು. ಜಿಲ್ಲಾವಾರು ಪರೀಕ್ಷೆ ಗುರಿಯನ್ನು ಪ್ರತಿನಿತ್ಯ ಕಡ್ಡಾಯವಾಗಿ ತಲುಪಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ನಿಗದಿಪಡಿಸಲಾದ ಕೋವಿಡ್ ಪರೀಕ್ಷೆ ಗುರಿಯಲ್ಲಿ ಶೇ 70ರಷ್ಟು ಪರೀಕ್ಷೆಗಳನ್ನು ಆರ್’ಟಿ–ಪಿಸಿಆರ್ ವಿಧಾನದ ಮೂಲಕ ಸರ್ಕಾರಿ ಪ್ರಯೋಗಾಲಯದಲ್ಲಿ ನಡೆಸಬೇಕು. ಶೇ 30ರಷ್ಟು ಪರೀಕ್ಷೆಗಳನ್ನು ರ್‍ಯಾಟ್ ಮಾದರಿಯಲ್ಲಿ ಮಾಡಬೇಕು ಎಂದು ಹೇಳಲಾಗಿದೆ.
ರಾಜ್ಯದ ಪ್ರಯೋಗಾಲಯದಲ್ಲಿ ಕಳೆದ 10 ದಿನಗಳಲ್ಲಿ ಪ್ರತಿನಿತ್ಯ ಸರಾಸರಿ 7,729 ಪರೀಕ್ಷೆಗಳನ್ನು ನಡೆಸಲಾಗಿದೆ. ಸೋಂಕು ದೃಢ ಪ್ರಮಾಣ ಸರಾಸರಿಶೇ 3.53 ರಷ್ಟಿದೆ. ಬೆಂಗಳೂರಿನಲ್ಲಿ ಸರಾಸರಿ 1,979 ಪರೀಕ್ಷೆಗಳನ್ನು ನಡೆಸಲಾಗಿದ್ದು, ಸೋಂಕು ದೃಢ ಪ್ರಮಾಣ ಶೇ 7.51ಕ್ಕೆ ತಲುಪಿದೆ. ಬಳ್ಳಾರಿಯಲ್ಲಿ ಶೇ 7.95, ಶಿವಮೊಗ್ಗದಲ್ಲಿ ಶೇ 6.2, ದಾವಣಗೆರೆಯಲ್ಲಿ ಶೇ 6.09, ಮೈಸೂರಿನಲ್ಲಿ ಶೇ 5.07, ಚಿಕ್ಕಮಗಳೂರಿನಲ್ಲಿ ಶೇ 4.34ರಷ್ಟು ದೃಢಪ್ರಮಾಣ ವರದಿಯಾಗಿದೆ. ಉಳಿದ ಜಿಲ್ಲೆಗಳಲ್ಲಿ ಈ ಪ್ರಮಾಣ ಶೇ 4ಕ್ಕಿಂತ ಕಡಿಮೆಯಿದೆ.
ಬೆಂಗಳೂರಿನಲ್ಲಿ ಪರೀಕ್ಷೆ ಗುರಿಯನ್ನು 10 ಸಾವಿರಕ್ಕೆ ಹೆಚ್ಚಿಸಲಾಗಿದೆ. ಇದೇ ರೀತಿ ಉಳಿದ ಜಿಲ್ಲೆಗಳಿಗೂ ಪರೀಕ್ಷೆಯ ಗುರಿಯನ್ನು ಎರಡು ಮೂರು ಪಟ್ಟು ಹೆಚ್ಚಿಸಲಾಗಿದೆ. ಶಿವಮೊಗ್ಗ, ಕೊಡಗು ಹಾಗೂ ಹಾವೇರಿಯಲ್ಲಿ ಈಗಾಗಲೇ ನಿಗದಿತ ಗುರಿಗಿಂತ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಇನ್ಫ್ಲುಯೆಂಜಾ ತರಹದ ಸೋಂಕುಗಳು (ILI) ಮತ್ತು ತೀವ್ರ ಉಸಿರಾಟದ ಸೋಂಕುಗಳು (SARI), ಮುಖ್ಯವಾಗಿ H1N1 (ಹಂದಿ ಜ್ವರ) ಮತ್ತು H3N2 ವೈರಸ್, ಕೋವಿಡ್ ಜೊತೆಗೆ ಕಳೆದ ಎರಡು ತಿಂಗಳುಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ಪ್ರಮಾಣ ಹೆಚ್ಚಾಗಿದೆ. ಆಸ್ಪತ್ರೆಯ ದಾಖಲಾತಿಗಳ ಹೆಚ್ಚಳಕ್ಕೆ XBB 1.16 ರೂಪಾಂತರ ಕಾರಣವೆಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ, ಈ ಸೋಂಕಿಗೆ ಆತಂಕ ಪಡುವ ಅಗತ್ಯವಿಲ್ಲ. ಸೋಂಕು ಹಾನಿಕಾರಕವಲ್ಲ. ಏಕೆಂದರೆ, ಈ ಸೋಂಕಿಗೊಳಗಾದವರ ಚೇತರಿಕೆ ಪ್ರಮಾಣ ಹೆಚ್ಚಾಗಿರುತ್ತದೆ. ಸೋಂಕಿಗೊಳಗಾದವರು 4-5 ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆಂದು ಅಭಯ ನೀಡಿದ್ದಾರೆ.
ಏಪ್ರಿಲ್ 1 ರಿಂದ ಈ ವರೆಗೂ ರಾಜ್ಯದಲ್ಲಿ ಕೋವಿಡ್ ನಿಂದಾಗಿ ಒಟ್ಟು 9 ಸಾವುಗಳು ವರದಿಯಾಗಿವೆ.
ಈಗಾಗಲೇ ಕೋವಿಡ್ ಸಲಹೆಯನ್ನು ನೀಡಲಾಗಿದ್ದು, ಸದ್ಯಕ್ಕೆ ಯಾವುದೇ ಹೊಸ ಮಾರ್ಗಸೂಚಿಗಳ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಏತನ್ಮಧ್ಯೆ, ಆರೋಗ್ಯ ಇಲಾಖೆ ನೀಡಿರುವ ವರದಿಗಳ ಪ್ರಕಾರ, ಏಪ್ರಿಲ್ 13 ರವರೆಗೆ, ಕರ್ನಾಟಕದಲ್ಲಿ ಸಕ್ರಿಯ ಪ್ರಕರಣಗಳು 1,498 ರಷ್ಟಿದೆ ಎಂದು ತಿಳಿದುಬಂದಿದೆ.