ಮನೆ ಆರೋಗ್ಯ ಕೋವಿಡ್-19 ಪ್ರಕರಣ ಹೆಚ್ಚಳ: ಎಚ್ಚರಿಕೆಯಿಂದಿರಬೇಕು. ಭಯಪಡುವ ಅಗತ್ಯವಿಲ್ಲ- ಮನಸುಖ್ ಮಾಂಡವೀಯ

ಕೋವಿಡ್-19 ಪ್ರಕರಣ ಹೆಚ್ಚಳ: ಎಚ್ಚರಿಕೆಯಿಂದಿರಬೇಕು. ಭಯಪಡುವ ಅಗತ್ಯವಿಲ್ಲ- ಮನಸುಖ್ ಮಾಂಡವೀಯ

0

ನವದೆಹಲಿ: ದೇಶದಲ್ಲಿ ಕೋವಿಡ್-19 ಪ್ರಕರಣಗಳ ಹೆಚ್ಚಳದ ಮಧ್ಯೆ, ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಅವರು, ಬುಧವಾರ ದೇಶದಲ್ಲಿ ಆರೋಗ್ಯ ಸೌಲಭ್ಯಗಳ ಸನ್ನದ್ಧತೆಯ ಪರಿಶೀಲನಾ ಸಭೆ ನಡೆಸಿದರು.

ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರು ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳೊಂದಿಗೆ ಅವರು ವರ್ಚುವಲ್ ಸಭೆ ನಡೆಸಿದರು. ಕೇಂದ್ರ ಸಚಿವಾಲಯಗಳು ಮತ್ತು ಸಂಬಂಧಿಸಿದ ಇಲಾಖೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಇದೇವೇಳೆ, ರಾಜ್ಯಗಳಿಗೆ ಕೇಂದ್ರದಿಂದ ಎಲ್ಲ ರೀತಿಯ ಬೆಂಬಲ ಸಿಗಲಿದೆ ಎಂದು ಭರವಸೆ ನೀಡಿದ ಅವರು, ನಾವು ಎಚ್ಚರಿಕೆಯಿಂದ ಇರಬೇಕು. ಆದರೆ, ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಆಸ್ಪತ್ರೆಯ ಸನ್ನದ್ಧತೆ, ಹೆಚ್ಚಿದ ಕಣ್ಗಾವಲು ಮತ್ತು ಜನರೊಂದಿಗೆ ಪರಿಣಾಮಕಾರಿ ಸಂವಹನದ ಅಣಕು ಪ್ರದರ್ಶನಗಳೊಂದಿಗೆ ಸಿದ್ಧರಾಗಿರುವುದು ಮುಖ್ಯ ಎಂದು ಸಚಿವರು ಹೇಳಿದರು.

ಪ್ರತಿ ಮೂರು ತಿಂಗಳಿಗೊಮ್ಮೆ ಎಲ್ಲ ಆಸ್ಪತ್ರೆಗಳಲ್ಲಿ ಅಣಕು ಪ್ರದರ್ಶನಗಳನ್ನು ನಡೆಸಬೇಕು ಎಂದು ಆರೋಗ್ಯ ಸಚಿವರು ಒತ್ತು ನೀಡಿದರು. ಚಳಿಗಾಲದ ಅವಧಿಯಲ್ಲಿ ಸೋಂಕು ಹರಡುವಿಕೆ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದೂ ರಾಜ್ಯಗಳನ್ನು ಒತ್ತಾಯಿಸಿದರು.

ನಮ್ಮ ಸನ್ನದ್ಧತೆಯಲ್ಲಿ ಯಾವುದೇ ಕೊರತೆ ಇರಬಾರದು. ಆರೋಗ್ಯವು ಯಾವುದೇ ರಾಜಕೀಯ ಮಾಡುವ ಕ್ಷೇತ್ರವಲ್ಲ. ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲ ರೀತಿಯ ಸಹಕಾರಕ್ಕೆ ಸಿದ್ಧವಿದೆ’ ಎಂದು ಮಾಂಡವೀಯ ಹೇಳಿದರು. ಇದು ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಸಮಯವಾಗಿದೆ ಎಂದು ತಿಳಿಸಿದರು.